ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೈಲಿಗಲ್ಲು ಸೃಷ್ಟಿಸಿದ ಸಿನಿಮಾಗಳ ನಿರ್ದೇಶಕ, 83 ವರ್ಷದ ಹಿರಿಯ ಬಿ.ವಿಜಯ ರೆಡ್ಡಿ ಇಂದು ಸಂಜೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿರುವ ‘ಬೆಳ್ಳಿ ಹೆಜ್ಜೆ’ ಕಾರ್ಯಕ್ರಮದ ಅತಿಥಿಯಾಗಿದ್ದಾರೆ. ಮಹಾದೇವ ದೇಸಾಯಿ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಇವರ ಛಾಯಾ ಚಿತ್ರ ಪ್ರದರ್ಶನ ಸಹ ಏರ್ಪಾಟು ಮಾಡಲಾಗಿದೆ.
ವಿಜಯ ರೆಡ್ಡಿ ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ಹಾಸ್ಯ ಹಾಗೂ ಹಾರರ್ ಸಿನಿಮಾಗಳ ನಿರ್ದೇಶನ ಮಾಡಿ ಜನಪ್ರಿಯತೆ ಪಡೆದವರು. ಡಾ. ರಾಜಕುಮಾರ್ ಅವರ ಮಯೂರ, ಗಂಧದ ಗುಡಿ (ಡಾ.ವಿಷ್ಣು ಸಹ ಅಭಿನಯಿಸಿದ ಸಿನಿಮಾ), ಹುಲಿಯ ಹಾಲಿನ ಮೇವು, ನಾ ನಿನ್ನ ಬಿಡಲಾರೆ, ಶ್ರೀನಿವಾಸ ಕಲ್ಯಾಣ, ಭಕ್ತ ಪ್ರಹ್ಲಾದ, ಸನಾದಿ ಅಪ್ಪಣ್ಣ, ಶಂಕರ್ ನಾಗ್ ಅಭಿನಯದ ಆಟೋರಾಜ, ವಿಷ್ಣುವರ್ಧನ ಅಭಿನಯದ ಕರ್ನಾಟಕ ಸುಪುತ್ರ, ಅನಂತ್ ನಾಗ್ ಅಭಿನಯದ ನಾ ನಿನ್ನ ಬಿಡಲಾರೆ, ಮುಳ್ಳಿನ ಗುಲಾಬಿ.. ಹೀಗೆ 48 ಸಿನಿಮಾಗಳನ್ನು ನಿರ್ದೇಶನ ಮಾಡಿದ ಹಿರಿಮೆ ಇವರದು.
ವಿಜಯ ರೆಡ್ಡಿ ಅವರು 1936ರಲ್ಲಿ ಜನಿಸಿ, 1953 ಕ್ಕೆ ಮದರಾಸಿಗೆ (ಇಂದಿನ ಚೆನ್ನೈ) ಬಂದರು. ಆಗಲೇ ವಿಠ್ಠಲಾಚಾರ್ಯ ಅವರ ಬಳಿ ಸಿದ್ದಲಿಂಗಯ್ಯ ಅವರು ಸಹಾಯಕರಾಗಿದ್ದರು. ವಿಜಯ ರೆಡ್ಡಿ ಅವರಿಗೆ ಸಂಕಲನ ಸಹಾಯಕನ ಕೆಲಸ ಮೊದಲು ನೀಡಲಾಯಿತು. ಇವರ ಶಿಸ್ತು, ಸಂಯಮ ಗಮನಿಸಿ ಸಹಾಯಕ ನಿರ್ದೇಶನಕ್ಕೆ ಬಡ್ತಿ ನೀಡಲಾಯಿತು. ವಿಜಯ ರೆಡ್ಡಿ ಅವರು ನಿರ್ದೇಶನ ಮಾಡಿದ ಮೊದಲ ತೆಲುಗು ಸಿನಿಮಾ ‘ಶ್ರೀಮತಿ’. 1970 ರಲ್ಲಿ ‘ರಂಗಮಹಲ್ ರಹಸ್ಯ’ ಇಂದ ಇವರು ಕನ್ನಡ ಚಿತ್ರ ನಿರ್ದೇಶನಕ್ಕೆ ಕಾಲಿಟ್ಟರು. ಮೊದಲ ರಾತ್ರಿ, ಕೌ ಬಾಯ್ ಕುಳ್ಳ ಸಿನಿಮಾಗಳ ನಿರ್ಮಾಣ ಸಹ ಮಾಡಿ ಜಯಭೇರಿ ಹೊಡೆದರು.
ಹೆಸರಾಂತ ನಿರ್ದೇಶಕ, ಕೆಸಿಎ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಕರ್ನಾಟಕ ವಾರ್ತಾ ಇಲಾಖೆ ನಿರ್ದೇಶಕ ಬೃಂಗೇಶ್ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಮಾಜಿ ವಾಣಿಜ್ಯ ಮಂಡಳಿ ಅಧ್ಯಕ್ಷರು ಕೆಸಿಎನ್ ಚಂದ್ರಶೇಖರ್, ಎಸ್ ಎ ಚಿನ್ನೇಗೌಡ, ಅಭಿನಯ ಶಾರದೆ ಜಯಂತಿ, ದ್ವಾರಕೀಶ್, ರಾಘವೇಂದ್ರ ರಾಜಕುಮಾರ್, ಓಂ ಸಾಯಿಪ್ರಕಾಶ್, ಎಂ ಎಸ್ ಉಮೇಶ್ ಉಪಸ್ಥಿತರಿರಲಿದ್ದಾರೆ.