ಸಿಲಿಕಾನ್ ಸಿಟಿ ಬೆಂಗಳೂರು ಕಟ್ಟಿದಾಗಿನಿಂದ ಇಂದಿನವರೆಗೂ ಪ್ರಭಾವಿ ವ್ಯಕ್ತಿಗಳು ಇಲ್ಲಿ ನೆಲೆಸಲು ಬಯಸುತ್ತಾರೆ. ಕರ್ನಾಟಕದವರು ಮಾತ್ರವಲ್ಲ ಹೊರಗಿನಿಂದ ಬಂದ ಸಾಕಷ್ಟು ಜನರು ಇಲ್ಲಿ ನೆಲೆಸಿದ್ದಾರೆ. ಹೊರ ರಾಜ್ಯದ ಬಹಳಷ್ಟು ವ್ಯಕ್ತಿಗಳು ಇಲ್ಲಿ ಆಸ್ತಿ ಕೂಡಾ ಖರೀದಿಸಿದ್ದಾರೆ.
ಈಗ ನಾವು ಹೇಳಲು ಹೊರಟಿರುವುದು ಮುಂಬೈನಿಂದ ಬೆಂಗಳೂರಿಗೆ ಬಂದು ಭೂಮಿ ಖರೀದಿಸಿದ ಸಿನಿಮಾ ಮಂದಿಯ ಬಗ್ಗೆ. ಇವರಲ್ಲಿ ಈಗ ಎಷ್ಟೋ ನಟರು ತಾವು ಎಂದೋ ಖರೀದಿಸಿದ್ದ ಭೂಮಿಯನ್ನು ಮಾರಿಹೋಗಿದ್ದಾರೆ. ಈ ಪಟ್ಟಿಯಲ್ಲಿ ಮೊದಲಿಗೆ ಖ್ಯಾತ ಹಿಂದಿ ನಟ ಅಶೋಕ್ ಕುಮಾರ್ ಕಾಣಸಿಗುತ್ತಾರೆ. ಅಶೋಕ್ ಕುಮಾರ್ ಜೊತೆಗೆ ನಟಿ ಮೌಸಮಿ ಚಟರ್ಜಿ, ವಿನೋದ್ ಮೆಹ್ರಾ ಹಾಗೂ ಕನ್ನಡ ಚಿತ್ರರಂಗದಿಂದ ಮುಂಬೈಗೆ ಹಾರಿ ಹಿಂದಿ ಸಿನಿಮಾಗಳನ್ನು ನಿರ್ಮಿಸಿದ ಎಸ್. ರಾಮನಾಥನ್ ( ಹಿರಿಯ ನಟ ಶಿವರಾಮ್ ಸಹೋದರ) ಬೆಂಗಳೂರು ಮೈಸೂರು ರಸ್ತೆಯಲ್ಲಿ 25 ಎಕರೆ ಭೂಮಿಯನ್ನು ಖರೀದಿ ಮಾಡಿದರು. ಅಶೋಕ್ ಕುಮಾರ್ ಅವರ ಅಳಿಯ, ಕಾಮಿಡಿ ನಟ ದೇವನ್ ವರ್ಮಾ ಕೂಡಾ ಅಲಸೂರು ಬಳಿ ಭೂಮಿ ಖರೀದಿಸಿ ಒಂದು ಫಾರ್ಮ್ಹೌಸ್ ಮಾಡಿದರು.
ನಂತರ ಮೆಜೆಸ್ಟಿಕ್ ಬಳಿಯ ಹಳೆ ಸಂಗಮ್ ಥಿಯೇಟರ್ ಬಳಿ ನಟ ದಿಲೀಪ್ ಕುಮಾರ್, ಶಕ್ತಿ ಸಮಂತ್, ಶಮ್ಮಿ ಕಪೂರ್ , ವಿನೋದ್ ಮೆಹ್ರಾ ಹಾಗೂ ಬೆಂಗಳೂರಿನವರೇ ಆದ ಆರ್.ಎನ್. ಮಾಂಡ್ರೆ (ನಟಿ ಶರ್ಮಿಳಾ ಮಾಂಡ್ರೆ ಅವರ ತಾತ) ಭೂಮಿ ಖರೀದಿಸಿದರು. ಆಗಿನ ಕಾಲದಲ್ಲಿ ಸಂಗಮ್ ಥಿಯೇಟರ್ನಲ್ಲಿ ಹೆಚ್ಚು ಹೆಚ್ಚು ಹಿಂದಿ ಸಿನಿಮಾಗಳು ಪ್ರದರ್ಶನವಾಗುತ್ತಿದ್ದವು. ಈಗ ಆ ಸ್ಥಳದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಇದೆ.
ಹಿರಿಯ ನಟಿ ವಹೀದಾ ರೆಹಮಾನ್ ಬನ್ನೇರುಘಟ್ಟ ರಸ್ತೆಯಲ್ಲಿ ಕೆಲವು ಎಕರೆ ಭೂಮಿ ಖರೀದಿಸಿ ಅಲ್ಲೇ ನೆಲೆಸಲು ಬಂದರು. ಈ ಸ್ಥಳದಲ್ಲಿ ಹೆಚ್ಚು ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಇಲ್ಲಿ ಫಾರ್ಮ್ಹೌಸ್ ಮಾಡಿಕೊಂಡು ಕೆಲವು ವರ್ಷಗಳ ಕಾಲ ನೆಲೆಸಿದ್ದ ಅವರು ನಂತರ ಮತ್ತೆ ಮುಂಬೈ ಸೇರಿದರು. ಇವರ ನಂತರ ಹೆಚ್ಚು ಗಮನ ಸೆಳೆದದ್ದು ಖಾನ್ ಸಹೋದರರು. ಸಂಜಯ್ ಖಾನ್ ಹಾಗೂ ಫಿರೋಜ್ ಖಾನ್ ಆಗಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರಿಗೆ ಬಹಳ ಆತ್ಮೀಯರಾಗಿದ್ದರಿಂದ ತುಮಕೂರು ರಸ್ತೆಯಲ್ಲಿ ಭೂಮಿ ಖರೀದಿ ಮಾಡಿದರು. ಈ ಜಾಗದಲ್ಲಿ ಇಂದಿಗೂ ದೊಡ್ಡ ಫಾರ್ಮ್ಹೌಸ್ ಇದೆ. ಪ್ರತಿಷ್ಠಿತ ವ್ಯಕ್ತಿಗಳ ಕುಟುಂಬದ ಮದುವೆ ಹಾಗೂ ಇನ್ನಿತರ ಸಮಾರಂಭಗಳು ಅಲ್ಲಿ ನಡೆಯುತ್ತಿದೆ. ಖ್ಯಾತ ಬಾಲಿವುಡ್ ನಟ ಹೃತಿಕ್ ರೋಶನ್ ವಿವಾಹ ಕೂಡಾ ಇಲ್ಲೇ ನಡೆದಿತ್ತು.
ನಟ, ನಿರ್ಮಾಪಕ ಸಂಜಯ್ ಖಾನ್ ಈ ಸ್ಥಳದಲ್ಲೇ ಇದ್ದುಕೊಂಡು ಮೈಸೂರಿನ ಪ್ರೀಮಿಯರ್ ಸ್ಟುಡಿಯೋನಲ್ಲಿ ‘ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್’ ಧಾರಾವಾಹಿ ನಿರ್ಮಾಣ ಮಾಡಿದ್ದರು. ಈ ಚಿತ್ರೀಕರಣ ಸಮಯದಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ 62 ವ್ಯಕ್ತಿಗಳು ಸಾವನಪ್ಪಿದರು . ಈ ದುರ್ಘಟನೆ 8 ಫೆಬ್ರವರಿ 1989 ರಂದು ಜರುಗಿತ್ತು. ಟಿಪ್ಪು ಪಾತ್ರದಲ್ಲಿ ನಟಿಸಿದ್ದ ಸಂಜಯ್ ಖಾನ್ ತೀವ್ರ ಸುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದರು.
ಶೋಲೆಯ ಗಬ್ಬರ್ ಸಿಂಗ್ ಪಾತ್ರದಲ್ಲಿ ನಟಿಸಿದ್ದ ಅಂಜಾದ್ ಖಾನ್ ಬೆಂಗಳೂರಿನ ಯುಟಿಲಿಟಿ ಬಿಲ್ಡಿಂಗ್ನಲ್ಲಿ ಪೆಂಟ್ ಹೌಸ್ ಮಾಡಿಕೊಂಡು ವಾಸವಿದ್ದರು. ಕೆಲವು ವರ್ಷಗಳ ನಂತರ ಅವರು ಮುಂಬೈಗೆ ತೆರಳಿದರು. ಖ್ಯಾತ ಹಿಂದಿ ಕಾಮಿಡಿ ನಟ ಮೆಹಮೂದ್ ಅವರು ಕೂಡಾ ದೇವನಹಳ್ಳಿ ಬಳಿ ಕುದುರೆಗಳನ್ನು ಸಾಕಲು ಒಂದು ಫಾರ್ಮ್ಹೌಸ್ ಪ್ರಾರಂಭಿಸಿದರು. ಕೆಲವು ವರ್ಷಗಳ ನಂತರ ಆ ಸ್ಥಳವನ್ನು ಅವರು ಮಾರಿದರು.
ಇನ್ನು ಮುಂಬೈನಿಂದ ಬಂದವರಲ್ಲಿ ಅಂಬಾಲಾಲ್ ಪಟೇಲ್ ಹಾಗೂ ಚಮನ್ ಲಾಲ್ ದೇಸಾಯಿ ಪ್ರಮುಖರು. ಬೆಂಗಳೂರು ಹವಾಮಾನವನ್ನು ಬಹಳ ಇಷ್ಟಪಟ್ಟಿದ್ದ ಇವರು ಮುಂಬೈನಲ್ಲಿ ಸಿನಿಮಾ ನಿರ್ಮಾಣ ಹಾಗೂ ವಿತರಣೆ ಮಾಡುತ್ತಿದ್ದರು. ಸರ್ವೋತ್ತಮ ಬಾದಾಮಿ ಅವರೊಂದಿಗೆ ಬೆಂಗಳೂರಿನಲ್ಲಿ ಜಾಗ ಖರೀದಿಸಿ ಇಲ್ಲೇ ನೆಲೆಸಿದ್ದಾರೆ. ನಂತರ ನಿರ್ಮಾಪಕ ಕೆ.ಸಿ. ದೇಸಾಯಿ ಹಾಗೂ ಪಟೇಲ್ ಆಗಮಿಸಿ ಬೆಂಗಳೂರಿನಲ್ಲಿ ಅಲಂಕಾರ್ ಚಿತ್ರಮಂದಿರವನ್ನು ಸ್ಥಾಪಿಸಿದರು. ಮಾಜಿ ವಾಣಿಜ್ಯ ಮಂಡಳಿ ಅಧ್ಯಕ್ಷ ದಿವಂಗತ ತಲ್ಲಮ್ ನಂಜುಂಡ ಶೆಟ್ಟಿ ಅವರೊಂದಿಗೆ ಸೇರಿ ನಿರ್ಮಿಸಿದ ಅಲಂಕಾರ್ ಚಿತ್ರಮಂದಿರವಿದ್ದ ಜಾಗದಲ್ಲಿ ಇದೀಗ ಪರ್ಲ್ ಪ್ಲಾಜಾ ನಿರ್ಮಿಸಲಾಗಿದೆ.
ಇವೆಲ್ಲವೂ 1960 ರಿಂದ 1980 ಸಮಯದಲ್ಲಿ ಜರುಗಿದ ಘಟನೆಗಳು. ಆದರೆ ಖಾಯಂ ಆಗಿ ಉಳಿದಿರುವುದು ಮಾತ್ರ ತುಮಕೂರು ರಸ್ತೆಯ ಸಂಜಯ್ ಖಾನ್ ಅವರ ಗೋಲ್ಡನ್ ಪ್ಯಾಲೇಸ್ ಅವೆನ್ಯೂ.