ಭಾರತೀಯ ಚಿತ್ರರಂಗದ ಬಿಗ್ ಬಿ ಅಮಿತಾಭ್ ಬಚ್ಚನ್ ಮೊದಲ ಬಾರಿಗೆ ಕನ್ನಡದಲ್ಲಿ ‘ಬಟರ್ಫ್ಲೈ’ ಸಿನಿಮಾಕ್ಕೆ ಹಾಡಿದ್ದಾರೆ. ಇದರೊಂದಿಗೆ ತೆಲುಗು ಹಾಗೂ ತಮಿಳು ಸಿನಿಮಾಕ್ಕೂ ಅಮಿತಾಭ್ ಕಂಠ ಲಭ್ಯವಾಗಿದೆ ಎಂದು ‘ಬಟರ್ಫ್ಲೈ’ ಚಿತ್ರದ ನಾಯಕಿ ಮತ್ತು ಜಂಟಿ ನಿರ್ಮಾಪಕಿ ಪಾರುಲ್ ಯಾದವ್ ಮಾಹಿತಿ ಹಂಚಿಕೊಂಡಿದ್ದಾರೆ.
ಹಾಗಾದರೆ ಅಮಿತಾಭ್ ಬಚ್ಚನ್ ಹಾಡಿರುವ ಹಾಡು ಯಾವುದು?
1978 ರ ‘ದೇವದಾಸಿ’ ಚಿತ್ರದ ‘ಸುಖವೀವ ಸುರಪಾನವಿದು ಸ್ವರ್ಗ ಸಮಾನಮ್....' ಹಾಡು ಬಟರ್ಫ್ಲೈ ಚಿತ್ರದಲ್ಲಿ ಮರುಬಳಕೆ ಮಾಡಿಕೊಳ್ಳಲಾಗಿದೆ. ಈ ಹಾಡನ್ನು ಜಿ.ಕೆ. ವೆಂಕಟೇಶ್ ಅವರ ರಾಗ ಸಂಯೋಜನೆಯಲ್ಲಿ ಎಸ್.ಪಿ ಬಾಲಸುಬ್ರಮಣ್ಯಂ ಹಾಡಿದ್ದರು. ಇದೀಗ ಇದನ್ನು ಅಮಿತಾಭ್ ಅವರ ಕಂಠದಲ್ಲಿ ರ್ಯಾಪ್ ಶೈಲಿಯಲ್ಲಿ ಹಾಡಿಸಿದ್ದಾರೆ, ಚಿತ್ರದ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ.
ಅಮಿತಾಭ್ ಬಚ್ಚನ್ ಈ ಹಿಂದೆ ‘ಅಮೃತ ಧಾರೆ’ ಕನ್ನಡ ಸಿನಿಮಾದಲ್ಲಿ ಒಂದು ಪುಟ್ಟ ಪಾತ್ರದಲ್ಲಿ ಅಭಿನಯಿಸಿದ್ದರು. ಆನಂತರ ಡಾ.ಶಿವರಾಜಕುಮಾರ್ ಅವರೊಂದಿಗೆ ಜಾಹೀರಾತಿನಲ್ಲಿ ಅಮಿತಾಭ್ ಕಾಣಿಸಿಕೊಂಡಿದ್ದರು. ಆದರೆ, ಇದೇ ಮೊದಲ ಬಾರಿಗೆ ಅವರು ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಹಾಡು ಹೇಳಿದ್ದಾರೆ.
ಇನ್ನು ಬರುವ ಏಪ್ರಿಲ್ನಲ್ಲಿ ನಾಲ್ಕು ಭಾಷೆಗಳ ಈ ಚಿತ್ರ ಬಿಡುಗಡೆಯಾಗಲಿದೆ. ಬಟರ್ಫ್ಲೈ ಹೆಸರಿನ ಕನ್ನಡದ ಚಿತ್ರದಲ್ಲಿ ಪಾರುಲ್ ಯಾದವ್, ತಮಿಳಿನಲ್ಲಿ ‘ಪ್ಯಾರಿಸ್ ಪ್ಯಾರಿಸ್’ನಲ್ಲಿ ಕಾಜಲ್ ಅಗರ್ವಾಲ್, ಕ್ವೀನ್ ತೆಲುಗು ಭಾಷೆಯಲ್ಲಿ ತಮನ್ನಾ ಭಾಟಿಯಾ, ಮಲಯಾಳಂ ಭಾಷೆಯಲ್ಲಿ ‘ಜಾಮ್ ಜಾಮ್’ ಆಗಿ ಮಂಜಿಮ ಮೋಹನ್ ಅಭಿನಯ ಮಾಡಿದ್ದಾರೆ. ರಮೇಶ್ ಅರವಿಂದ್ ಕನ್ನಡ ಹಾಗೂ ತಮಿಳು ಭಾಷೆಗಳ ಚಿತ್ರದ ನಿರ್ದೇಶಕರು.
ಪಾರುಲ್ ಯಾದವ್ ಹೇಳಿರುವಂತೆ ನಾಲ್ಕು ಭಾಷೆಗಳ ಹಕ್ಕನ್ನು ‘ನೆಟ್ ಫ್ಲಿಕ್ಸ್’ ದೊಡ್ಡ ಮೊತ್ತಕ್ಕೆ ಪಡೆದಿದೆ. ಹಾಡುಗಳ ಹಕ್ಕನ್ನು ‘ಜೀ’ ಸಂಸ್ಥೆ ಖರೀದಿಸಿದ್ದು, ಚಿತ್ರದ ಅರ್ಧ ಭಾಗದ ಹಣ ವಾಪಸ್ಸು ಬಂದಿದೆ. ಇದೊಂದು ಬಹಳ ಖುಷಿಯ ವಿಚಾರ ಎಂದಿದ್ದಾರೆ.