1990ರಲ್ಲಿ ಕಾಶ್ಮೀರ ಪಂಡಿತರ ಮೇಲಿನ ದೌರ್ಜನ್ಯದ ನೈಜ ಕಥಾಹಂದರವನ್ನು ಹೊಂದಿರುವ 'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತೆರೆ ಮೇಲೆ ತಂದಿದ್ದು, ಚಿತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆಲ ದಿನಗಳ ಹಿಂದೆ ಪಿಎಂ ಮೋದಿಯವರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಇದರ ಬೆನ್ನಲ್ಲೆ ಸ್ಪೀಕರ್ ಕಾಗೇರಿಯವರು ಎಲ್ಲಾ ಶಾಸಕರಿಗೂ ಮಂತ್ರಿಮಾಲ್ನಲ್ಲಿ ಸಿನಿಮಾ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದರು. ಚಿತ್ರ ನೋಡಿದ ನಾಯಕರು ಸಿನಿಮಾದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಮಂತ್ರಿಮಾಲ್ನಲ್ಲಿ ಸಿನಿಮಾ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಶಾಸಕರು, ಸಚಿವರು ಹಾಗೂ ವಿರೋಧ ಪಕ್ಷಗಳ ಸದಸ್ಯರು ಚಿತ್ರ ನೋಡಲು ಆಗಮಿಸಬೇಕೆಂದು ಸ್ಪೀಕರ್ ಮನವಿ ಮಾಡಿದ್ದರು. ಅದರಂತೆ ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಗೋವಿಂದ ಕಾರಜೋಳ,ನಾರಾಯಣಗೌಡ, ಲಕ್ಷ್ಮಣ ಸವದಿ, ಕೋಟ ಶ್ರೀನಿವಾಸ ಪೂಜಾರಿ, ಮಾಧುಸ್ವಾಮಿ, ಪ್ರಭು ಚೌವ್ಹಾಣ್, ಎಸ್, ಆರ್ ವಿಶ್ವನಾಥ್, ರೇಣುಕಾಚಾರ್ಯ, ಬಸವರಾಜ್, ಜೆಡಿಎಸ್ ಶಾಸಕ ಪುಟ್ಟರಾಜು ಮತ್ತಿಮನಿ ಸೇರಿದಂತೆ ಅನೇಕ ನಾಯಕರು ಸಿನಿಮಾ ವೀಕ್ಷಿಸಿದರು.
ಈ ಸಿನಿಮಾ ವೀಕ್ಷಿಸಿದ ಬಳಿಕ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ನಮ್ಮ ತಾಯಿನಾಡಲ್ಲೇ ನಿರಾಶ್ರಿತರಾಗಿ ಬದುಕಿದ ಪಂಡಿತರ ಕಥೆಯಾಗಿದೆ. ಮಾನ ಮತ್ತು ಪ್ರಾಣ ಉಳಿಸಿಕೊಳ್ಳಲು ನಿರ್ಗಮಿಸಿದವರ ಕಥೆಯಾಗಿದೆ. ನೆರೆ ರಾಷ್ಟ್ರದ ಕುಮ್ಮಕ್ಕಿನಿಂದ ಪಂಡಿತರ ಆಸ್ತಿ-ಪಾಸ್ತಿ ವಶಪಡಿಸಿಕೊಂಡಿರುವ ಸನ್ನಿವೇಶ ಸೇರಿದಂತೆ ಹಲವು ಅಂಶಗಳನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ನಿರ್ದೇಶಕ ಅಗ್ನಿಹೋತ್ರಿ ಸಿನಿಮಾದಲ್ಲಿ ಚೆನ್ನಾಗಿ ಚಿತ್ರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಸಚಿವ ಆರ್, ಅಶೋಕ್, ರೇಣುಕಾಚಾರ್ಯ, ಬಿಜೆಪಿ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ಪ್ರತಿಯೊಬ್ಬರು ಸಿನಿಮಾ ನೋಡುವಂತೆ ಸಲಹೆ ನೀಡಿದರು.
ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ವಿಷಯವನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ವಿವೇಕ್ ಅಗ್ನಿಹೋತ್ರಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಅಭಿಷೇಕ್ ಅಗರ್ವಾಲ್ ಬಂಡವಾಳ ಹೂಡಿದ್ದಾರೆ.
ಇದನ್ನೂ ಓದಿ: 'ದಿ ಕಾಶ್ಮೀರ್ ಫೈಲ್ಸ್' ಚಿತ್ರದಿಂದ ಬಾಲಿವುಡ್ ಮಾಡಿದ ಎಲ್ಲ ಪಾಪ ಕಳೆದಿದೆ: ಕಂಗನಾ ರಣಾವತ್