ಕನ್ನಡ ಜನಪ್ರಿಯ ರಿಯಾಲಿಟಿ ಶೋ, ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಯಾಗಿ ಗಮನ ಸೆಳೆದಿದ್ದ ದಿವ್ಯಾ ಸುರೇಶ್ಗೆ ಬೈಕ್ ಅಪಘಾತವಾಗಿದೆ. ಸ್ಕೂಟರ್ ಚಲಾಯಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ಅವರ ಮುಖ ಹಾಗು ಕೈಗೆ ತೀವ್ರವಾಗಿ ಪೆಟ್ಟಾಗಿದೆ.
ಸೋಮವಾರ ಸಂಜೆ ಈ ಬೈಕ್ ಅಪಘಾತ ಸಂಭವಿಸಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಸೋಮವಾರ ಸಂಜೆ 2ನೇ ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡು ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿ ಸ್ಕೂಟರ್ ಚಲಾಯಿಸಿಕೊಂಡು ಬರುತ್ತಿದ್ದರಂತೆ. ಈ ವೇಳೆ ರಸ್ತೆಯಲ್ಲಿದ್ದ ನಾಲ್ಕೈದು ನಾಯಿಗಳು ಜಗಳವಾಡುತ್ತ ದಿವ್ಯಾ ಸುರೇಶ್ ಅವರ ಸ್ಕೂಟಿಗೆ ಅಡ್ಡ ಬಂದ ಪರಿಣಾಮ ದಿವ್ಯಾ ಗಾಬರಿಯಾಗಿದ್ದಾರೆ.
ನಾಯಿಗಳ ಕಚ್ಚಾಟದಿಂದ ತಪ್ಪಿಸಿಕೊಳ್ಳಲು ಹೋಗಿರುವ ಅವರು, ಸ್ಕೂಟಿಯನ್ನು ವೇಗವಾಗಿ ಓಡಿಸುವ ಭರದಲ್ಲಿ ಸ್ಕಿಡ್ ಆಗಿ ಬಿದ್ದಿದ್ದಾರೆ. ಈ ವೇಳೆ ದಿವ್ಯಾ ಅವರ ಮುಖ ಮತ್ತು ಕೈಗೆ ಪೆಟ್ಟಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ. ಇದೀಗ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಸದ್ಯ ಮನೆಯಲ್ಲಿ ದಿವ್ಯಾ ಸುರೇಶ್ ವಿಶ್ರಾಂತಿ ಪಡೆಯುತ್ತಿದ್ದಾರೆ.
ಒಂದು ತಿಂಗಳ ಕಾಲ ಅವರಿಗೆ ವಿಶ್ರಾಂತಿ ಅಗತ್ಯವಾಗಿದೆ. ಈ ಬಗ್ಗೆ ಇನ್ಸ್ಟಾಗ್ರಾಂ ಖಾತೆಯಲ್ಲೂ ಅವರ ಪರವಾಗಿ ಮಾಹಿತಿ ನೀಡಲಾಗಿದೆ. 'ಎಲ್ಲರಿಗೂ ನಮಸ್ಕಾರ ದಿವ್ಯಾ ಸುರೇಶ್ ಅವರು ಒಂದು ಸಣ್ಣ ಅಪಘಾತಕ್ಕೆ ಒಳಗಾಗಿದ್ದಾರೆ ಎಂದು ಹೇಳಲು ಬೇಸರ ವ್ಯಕ್ತಪಡಿಸುತ್ತಿದ್ದೇವೆ. ಸದ್ಯದ ಮಟ್ಟಿಗೆ ಅವರು ಕೆಲ ದಿನಗಳ ಕಾಲ ಇನ್‌ಸ್ಟಾಗ್ರಾಮ್‌ನಲ್ಲಿ ಸಕ್ರಿಯರಾಗಿರುವುದಿಲ್ಲ' ಅಂತ ಅಭಿಮಾನಿಗಳಿಗೆ ತಿಳಿಸಲಾಗಿದೆ. ಸದ್ಯ ದಿವ್ಯಾ ಸುರೇಶ್ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡಿದೆಯಂತೆ.
ಓದಿ: ಮುಂದಿನ ತಿಂಗಳು ಜೆಡಿಎಸ್ನಿಂದ ಮನೆ ಬಾಗಿಲಿಗೆ ಜಲಧಾರೆ ಮಾಹಿತಿ: ಹೆಚ್ ಡಿ ಕುಮಾರಸ್ವಾಮಿ