ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರ ರಾಜಕುಮಾರ ಸಿನಿಮಾದಲ್ಲಿ ರಿಮೋಟ್ಗಾಗಿ ಕಿತ್ತಾಡುವ ಅಜ್ಜಿ ಪಾತ್ರ ಯಾರು ತಾನೆ ಮರೆಯೋಕೆ ಸಾಧ್ಯ. ಆ ಪಾತ್ರ ನಿರ್ವಹಿಸಿರುವ ರಂಗಭೂಮಿ ಕಲಾವಿದೆ ಭಾರ್ಗವಿ ನಾರಾಯಣ ಅವರು ಕಲಾ ಕ್ಷೇತ್ರದಲ್ಲಿ ಇಟ್ಟ ಹೆಜ್ಜೆ ಬಹು ದೊಡ್ಡದು.
ಮುಕ್ತ ಧಾರಾವಾಹಿಯಲ್ಲಿನ ಅವರ ಪಾತ್ರಕ್ಕೆ ಮನಸೋಲದ ಕನ್ನಡಿಗರಿಲ್ಲ. ಪಲ್ಲವಿ ಅನುಪಲ್ಲವಿ, ಎರಡು ಕನಸು, ಬಾ ನಲ್ಲೆ ಮಧುಚಂದ್ರಕೆ, ಅಂತಿಮ ಘಟ್ಟ, ಜಂಬೂ ಸವಾರಿ, ಕಾಡಬೆಳದಿಂಗಳು ಸಿನಿಮಾಗಳಲ್ಲಿನ ಅವರ ಮಾಗಿದ ನಟನೆ ಪ್ರತಿಭೆಗೆ ಹಿಡಿದ ಕನ್ನಡಿ.
ರಾಜ್ಯ ಸರ್ಕಾರವು ಈ ಕಲಾವಿದೆಯನ್ನು ಗುರುತಿಸಿ ಈ ಸಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು, ರಂಗಭೂಮಿಗೆ ಸಂದ ಗೌರವವಾಗಿದೆ.
ಕಲಾ ಕುಟುಂಬ: ಭಾರ್ಗವಿ ನಾರಾಯಣ್ ಅವರ ಹಿಂದೆ ಒಂದು ಕಲಾ ಕುಟುಂಬವೇ ಇದೆ. ಇವರು ಮೇಕಪ್ ನಾನಿ ಎಂದೇ ಪ್ರಸಿದ್ದರಾದ ನಂಜುಡಯ್ಯ ನಾರಾಯಣರವರ ಪತ್ನಿ. ಇವರು ಪುತ್ರ ಪ್ರಕಾಶ್ ಬೆಳವಾಡಿ, ಪುತ್ರಿ ಸುಧಾ ಬೆಳವಾಡಿ ,ಮತ್ತು ಮೊಮ್ಮಗಳು ಸಂಯುಕ್ತಾ ಹೊರನಾಡು ಕೂಡ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.
ನಟಿಯಾಗಿ ಗುರುತಿಸಿಕೊಂಡಿರುವ ಭಾರ್ಗವಿ ನಾರಾಯಣ್ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿಯೂ ಗುರುತಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಎಐಆರ್ನ ಮಹಿಳಾ ಕಾರ್ಯಕ್ರಮಗಳಿಗಾಗಿ ಮತ್ತು ಮಹಿಳಾ ಸಂಘದ ಮಕ್ಕಳಿಗಾಗಿ ಕರ್ನಾಟಕ ನಾಟಕಗಳನ್ನು ಬರೆದಿರುವುದರ ಜೊತೆಗೆ ಅವುಗಳನ್ನು ಸ್ವತಃ ಅವರೇ ನಿರ್ದೇಶಿಸಿದ್ದಾರೆ.