ನೈಜ ಘಟನೆಯೊಂದನ್ನು ಆಧಾರವಾಗಿಟ್ಟುಕೊಂಡು ತಯಾರಿಸಲಾಗಿರುವ ‘ಭಾನು ವೆಡ್ಸ್ ಭೂಮಿ’ ಸಿನಿಮಾದ ಆಡಿಯೋ ಬಿಡುಗಡೆಯಾಗಿದೆ. ಚಿತ್ರವನ್ನು ಜಿ.ಕೆ. ಆದಿ ನಿರ್ದೇಶಿಸಿದ್ದು ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾವಾಗಿದೆ.
ಈ ಚಿತ್ರದ ಮೂಲಕ ಸೂರ್ಯ ಪ್ರಭು ಎಂಬ ನಾಯಕ ಚಂದನವನಕ್ಕೆ ಪರಿಚಯವಾಗುತ್ತಿದ್ದಾರೆ. ಪೂರ್ವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕಿಶೋರ್ ಶೆಟ್ಟಿ ನಿರ್ಮಾಣದ ‘ಭಾನು ವೆಡ್ಸ್ ಭೂಮಿ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯಾವುದೇ ಕತ್ತರಿ ಪ್ರಯೋಗವಿಲ್ಲದೆ ಯು/ಎ ಸರ್ಟಿಫಿಕೇಟ್ ನೀಡಿದೆ. ಇಂದು ಚಿತ್ರದ ಆಡಿಯೋ ಕೂಡಾ ಬಿಡುಗಡೆಯಾಗಿದೆ. ನಾಯಕ ಸೂರ್ಯಪ್ರಭು ಭಾನು ಪಾತ್ರದಲ್ಲಿ ನಟಿಸಿದ್ದರೆ, ನಾಯಕಿ ರಿಷಿತಾ ಮಲ್ನಾಡ್ ಭೂಮಿ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಹಾಸ್ಯನಟ ರಂಗಾಯಣ ರಘು ಒಂದು ಹಾಡನ್ನು ಹಾಡಿರುವುದು ಚಿತ್ರದ ವಿಶೇಷ. ಈ ಮೊದಲು ಸಣ್ಣ ಸಣ್ಣ ಬೀಟ್ಗಳನ್ನು ಹಾಡಿದ್ದ ರಂಗಾಯಣ ರಘು ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ಗಾಯಕರಾಗಿದ್ದಾರೆ ಎನ್ನಬಹುದು. ಚಿತ್ರದ ಹಾಡುಗಳಿಗೆ ಎ.ಎಂ. ನೀಲ್ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಗಣೇಶ್ ಹೆಗ್ಡೆ ಛಾಯಾಗ್ರಹಣವಿದ್ದು. ಶ್ರೀನಿವಾಸ್ ಪಿ. ಬಾಬು ಸಂಕಲನ ಇದೆ. ಗಿರೀಶ್, ಮೈಕೋಮಂಜು, ಸಿಲ್ವಾಮೂರ್ತಿ, ಹಂಸ, ಸೂರ್ಯಕಿರಣ್, ಪಲ್ಲವಿ ಶೆಟ್ಟಿ, ಹೆಚ್.ಎಂ.ಟಿ. ವಿಜಿ, ಪ್ರವೀಣ್, ಮಿಮಿಕ್ರಿ ರಾಜು ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಮುಂದಿನ ತಿಂಗಳು ತೆರೆ ಕಾಣಲಿದೆ.