ನಟ ನಿರ್ದೇಶಕ ರಿಷಭ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿರುವ 'ಬೆಲ್ ಬಾಟಂ' ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಚಿತ್ರತಂಡ ಈ ಖುಷಿಯನ್ನು ಮಾಧ್ಯಮಗಳ ಜೊತೆ ಹಂಚಿಕೊಂಡು ಕನ್ನಡ ಸಿನಿಪ್ರಿಯರಿಗೆ ಧನ್ಯವಾದ ಹೇಳಿದೆ.
'ಬೆಲ್ ಬಾಟಂ' ಚಿತ್ರ ಐವತ್ತು ದಿನಗಳನ್ನು ಪೂರೈಸಿದರೂ ಸಹ ಮಲ್ಟಿಪ್ಲೆಕ್ಸ್ಗಳಲ್ಲಿ ಈಗಲೂ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ ಎಂದು ನಿರ್ದೇಶಕ ಜಯತೀರ್ಥ ಹೇಳಿದರು. ಅಲ್ಲದೆ ಈಗಾಗಲೇ ಹಿಂದಿ, ತೆಲುಗು, ತಮಿಳಿಗೆ 'ಬೆಲ್ ಬಾಟಂ' ರಿಮೇಕ್ ರೈಟ್ಸ್ ಸೇಲಾಗಿದೆ. ಈಗ ಮಲಯಾಳಂಗೂ ಕೂಡಾ ರೈಟ್ಸ್ ಕೇಳುತ್ತಿದ್ದು, ಇನ್ನೆರಡು ದಿನಗಳಲ್ಲಿ ಅದೂ ಕೂಡಾ ಫೈನಲ್ ಆಗಲಿದೆ ಎಂದು ನಿರ್ದೇಶಕ ಖುಷಿ ಹೇಳಿಕೊಂಡರು. ವಿಶೇಷ ಎಂದರೆ ತೆಲುಗಿನಲ್ಲಿ ಜಯತೀರ್ಥ ಅವರನ್ನೇ ನಿರ್ದೇಶನಕ್ಕೆ ಆಫರ್ ಮಾಡಿರುವುದು ಕೂಡಾ ಖುಷಿಯ ವಿಚಾರವಾಗಿದೆ. ಆದರೆ ಜಯತೀರ್ಥ ಇದರ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಮುಂದಿನ ದಿನಗಳಲ್ಲಿ ಅವರ ನಿರ್ಧಾರ ತಿಳಿಸಲಿದ್ದಾರೆ.
ಇನ್ನು ಚಿತ್ರದಲ್ಲಿ ನಟಿಸಿದ್ದ ಸಾಕಷ್ಟು ಕಲಾವಿದರಿಗೆ ಬೇರೆ ಬೇರೆ ಸಿನಿಮಾಗಳಿಂದ ಅವಕಾಶಗಳು ಹುಡುಕಿ ಬರುತ್ತಿದ್ದು, ಎಲ್ಲರೂ ಬ್ಯುಸಿಯಾಗಿದ್ದೇವೆ ಎಂದು ನಟ ರಿಷಭ್ ಶೆಟ್ಟಿ ತಿಳಿಸಿದರು. ಇದರೊಂದಿಗೆ 'ಬೆಲ್ ಬಾಟಂ' ಐವತ್ತು ದಿನಗಳನ್ನು ಪೂರೈಸಿದ ದಿನವೇ ನನಗೆ ಮಗ ಹುಟ್ಟಿದ್ದು ಡಬಲ್ ಖುಷಿ ಎಂದು ರಿಷಭ್ ಹೇಳಿದ್ದಾರೆ. ಇನ್ನು ಕುಸುಮ ಪಾತ್ರ ಕೂಡಾ ಜನರಿಗೆ ಇಷ್ಟವಾಗಿದ್ದು, ಚಿತ್ರದ ಬಗ್ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ ಎಂದು ಚಿಕ್ಕಮಗಳೂರು ಚೆಲುವೆ ಹರಿಪ್ರಿಯ ಖುಷಿ ಹಂಚಿಕೊಂಡರು.
ಅದೇನೆ ಇರಲಿ ಸ್ಟಾರ್ಗಳ ಚಿತ್ರಗಳೇ ಥಿಯೇಟರ್ನಲ್ಲಿ ನಿಲ್ಲಲು ತಿಣುಕಾಡುವ ಈ ಮಧ್ಯೆ ಕಂಟೆಂಟ್ನಿಂದ ಸೌಂಡ್ ಮಾಡಿ ಐವತ್ತು ದಿನಗಳನ್ನು ಪೂರೈಸಿದ 'ಬೆಲ್ ಬಾಟಂ' ಈಗ ಸೆಂಚುರಿ ಬಾರಿಸಲು ರೆಡಿಯಾಗಿರುವುದು ಕನ್ನಡ ಚಿತ್ರರಂಗ ಹೆಮ್ಮೆ ಪಡುವ ವಿಷಯವಾಗಿದೆ.