ಸಿನಿಮಾಗಳನ್ನು ನೋಡಿ ಏನಾದರೂ ಒಳ್ಳೆಯದನ್ನು ಕಲಿಯುವಂತೆ ಇರಬೇಕು. ಕೆಟ್ಟ ವಿಚಾರಗಳಿಗೆ ಪ್ರೇರೇಪಿಸುವಂತೆ ಇರಬಾರದು ಎಂದು ಇಂದಿನ ಸಿನಿಮಾ, ಧಾರಾವಾಹಿಗಳ ಬಗ್ಗೆ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಬೇಸರ ವ್ಯಕ್ತಪಡಿಸಿದರು.
'ಕುತಸ್ಥ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಾಸ್ಕರ್ ರಾವ್ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ನೋಡಿ, ಹಾಡಿನಲ್ಲಿ ವಿಷ್ಣುವರ್ಧನ್ ಅವರ ಪಾರ್ಥೀವ ಶರೀರವನ್ನು ತೋರಿಸಿದಕ್ಕೆ ಬೇಸರ ವ್ಯಕ್ತಪಡಿಸಿದರು. ನಾವು ಮನರಂಜನೆ ಪಡೆಯಲು ಥಿಯೇಟರ್ಗೆ ಬರುತ್ತೇವೆ. ಆದ್ದರಿಂದ ಚಿತ್ರಗಳಲ್ಲಿ ಅನಗತ್ಯವಾಗಿ ನಮ್ಮನ್ನು ಅಗಲಿದ ನಟರ ಪಾರ್ಥೀವ ಶರೀರವನ್ನು ತೋರಿಸಬೇಡಿ. ಒಂದು ವೇಳೆ ತೋರಿಸಲೇಬೇಕು ಎಂದಿದ್ದರೆ ಅವರು ಬದುಕಿದ್ದಾಗ ಉತ್ಸಾಹದಿಂದ ಇದ್ದ ವಿಡಿಯೋ ತೋರಿಸಿ ಎಂದು ಮನವಿ ಮಾಡಿದರು.
ಸಿನಿಮಾ ಕೇವಲ ಟೈಂ ಪಾಸ್ಗೆ ಸೀಮಿತ ಆಗಿರಬಾರದು. ನ್ಯಾಚುರಲ್ ಆಗಿರುವಂತ ಒಳ್ಳೆಯ ಸಿನಿಮಾ ಮಾಡಿ. ಇಂದಿನ ಧಾರಾವಾಹಿಗಳಲ್ಲಿ ಕೂಡಾ ಅನಗತ್ಯ ವಿಚಾರಗಳನ್ನು ತೋರಿಸಲಾಗುತ್ತಿದೆ. ಇವೆಲ್ಲಾ ಸಮಾಜಕ್ಕೆ ಒಳ್ಳೆಯದಲ್ಲಿ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.