ಬೆಂಗಳೂರು : ಸ್ಯಾಂಡಲ್ವುಡ್ ಡ್ರಗ್ಸ್ಗೆ ನಂಟು ಆರೋಪ ಸಂಬಂಧ ಮಾಜಿ ಸಚಿವ ಜೀವರಾಜ್ ಪುತ್ರ ಆದಿತ್ಯ ಆಳ್ವ ಸೇರಿದಂತೆ ಪ್ರಕರಣದಲ್ಲಿ ಬಂಧಿತರಾಗಿದ್ದ ಐವರು ಆರೋಪಿಗಳಿಗೆ ಜಾಮೀನು ದೊರೆತಿದೆ.
ಈ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ಆದಿತ್ಯ ಆಳ್ವ, ವಿರೇನ್ ಖನ್ನಾ, ರಾಹುಲ್ ತೂನ್ಸೆ, ಆದಿತ್ಯ ಅಗರವಾಲ್ ಹಾಗೂ ಬಿ.ಆರ್. ರವಿಶಂಕರ್ಗೆ ನಗರದ 35ನೇ ಸಿಟಿ ಸಿವಿಲ್ ಅಂಡ್ ಸೆಷನ್ಸ್ ನ್ಯಾಯಾಲಯದ ನ್ಯಾ.ಜಿ.ಎಂ. ಸೀನಪ್ಪ ಅವರು ಷರತ್ತುಬದ್ದ ಜಾಮೀನು ಮಂಜೂರು ಮಾಡಿದ್ದಾರೆ.
ತಲಾ ಮೂರು ಲಕ್ಷ ಬಾಂಡ್, 2 ಶ್ಯೂರಿಟಿ ಹಾಗೂ ಸಾಕ್ಷ್ಯ ನಾಶಪಡಿಸದಂತೆ ಆರೋಪಿಗಳಿಗೆ ನ್ಯಾಯಾಲಯ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.
ಸೆ.25 ರಂದು ಹೆಬ್ಬಾಳದಲ್ಲಿರುವ ಹೌಸ್ ಆಫ್ ಲೈಫ್ ಹೆಸರಿನ ಆದಿತ್ಯ ನಿವಾಸದ ಮೇಲೆ ದಾಳಿ ನಡೆದಿತ್ತು. ಡ್ರಗ್ಸ್ ಮಾರಾಟ ಆರೋಪ ಹಿನ್ನೆಲೆಯಲ್ಲಿ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆದಿತ್ಯ ಆಳ್ವ ಆರೋಪಿಯಾಗಿದ್ದ. ಮೂರು ತಿಂಗಳ ಬಳಿಕ ಸಿಸಿಬಿ ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದರು. ಇದೇ ರೀತಿ ಹೈ ಪೈ ಪಾರ್ಟಿ ಆಯೋಜಿಸಿ ಡ್ರಗ್ಸ್ ಪೆಡ್ಲರ್ ಆಗಿದ್ದ ವಿರೇನ್ ಖನ್ನಾ, ಆದಿತ್ಯ ಅಳ್ವ, ರಾಹುಲ್ ಹಾಗೂ ರವಿಶಂಕರ್ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು.
ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಈಗಾಗಲೇ ಜಾಮೀನು ಪಡೆದು ಹೊರಬಂದಿದ್ದಾರೆ.