ಬೆಂಗಳೂರು/ಹಾವೇರಿ: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಬಿಜೆಪಿ ಆರೋಪವನ್ನು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ತಳ್ಳಿಹಾಕಿದ್ದಾರೆ. 'ಇದು ನನ್ನ ವಿರುದ್ಧದ ರಾಜಕೀಯ ಷಡ್ಯಂತ್ರ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ' ಎಂದು ಸಚಿವರು ತಿಳಿಸಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಚಂದಾಪುರದಲ್ಲಿ ಬಿಜೆಪಿ ಆರೋಪದ ಕುರಿತು ಮಾತನಾಡಿದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ನನ್ನ ಮೇಲೆ ಬಂದಿರುವ ಆರೋಪ ರಾಜಕೀಯ ಷಡ್ಯಂತ್ರ ಎಂದಿದ್ದಾರೆ.
ನಮ್ಮ ಇಲಾಖೆಯಲ್ಲಿ ಈ ರೀತಿಯ ಯಾವುದೇ ಅವ್ಯವಹಾರ ನಡೆದಿಲ್ಲ. ಇಲಾಖೆಯಲ್ಲಿ ಯಾವುದೇ ನೇಮಕಾತಿ ನಡೆದಿಲ್ಲ, ಯಾವುದೇ ವರ್ಗಾವಣೆ ನಡೆದಿಲ್ಲ. ಯಾವುದೇ ಬಡ್ತಿ ನೀಡಿಲ್ಲ ಎಂದು ತಿಮ್ಮಾಪುರ ಸ್ಪಷ್ಟಪಡಿಸಿದ್ದಾರೆ.
ನಾನು ಯಾರನ್ನೂ ವರ್ಗಾವಣೆ ಮಾಡೇ ಇಲ್ಲ. ಅವರು ಯಾರಿಗೆ ಹಣ ಕೊಟ್ಟಿದ್ದಾರೆ ಗೊತ್ತಿಲ್ಲ? ಆ ರೀತಿ ಹಣ ನೀಡಿದ್ದರೆ ಯಾರಿಗೆ ನೀಡಿದ್ದಾರೆ ಕೇಳಿ ಎಂದು ಪ್ರಶ್ನಿಸಿದರು. ನಾನು ಯಾವುದೇ ಹಣ ತಗೊಂಡಿಲ್ಲ. ಲೈಸನ್ಸ್ ನವೀಕರಣಕ್ಕೆ ಯಾರಿಗೂ ಯಾವುದೇ ಕಿರುಕುಳ ನೀಡಿಲ್ಲ ಮತ್ತು ಹಣ ಪಡೆದಿಲ್ಲ. ಇದು ನನ್ನ ವಿರುದ್ಧದ ರಾಜಕೀಯ ಷಡ್ಯಂತ್ರ ಅಷ್ಟೇ. ಇದು ಸುಳ್ಳು ಆರೋಪ. ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ತಿಮ್ಮಾಪುರ ತಿಳಿಸಿದರು.
ಬಿಜೆಪಿ ಆರೋಪ: ಕಾಂಗ್ರೆಸ್ ಸರ್ಕಾರದ ಲಂಚಾವತಾರದ ಮತ್ತೊಂದು ಕರಾಳ ಅಧ್ಯಾಯ ಬಹಿರಂಗಗೊಂಡಿದ್ದು, ಅಬಕಾರಿ ಸಚಿವರನ್ನು ವಜಾ ಮಾಡುವಂತೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯ ಮದ್ಯ ಮಾರಾಟಗಾರರ ಸಂಘವು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಅಬಕಾರಿ ಸಚಿವರು 'ಮಂಥ್ಲಿ ಮನಿ' ಹೆಸರಿನಲ್ಲಿ ಮದ್ಯದ ಅಂಗಡಿಗಳಿಂದ ಪ್ರತಿ ತಿಂಗಳಿಗೆ 15 ಕೋಟಿ ರೂ. ರೂಪಾಯಿಯಂತೆ ವರ್ಷಕ್ಕೆ 180 ಕೋಟಿ ರೂ. ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಅಬಕಾರಿ ಸಚಿವರನ್ನು ಬದಲಾಯಿಸಲು ಕೋರಿದ್ದಾರೆ ಎಂದು ಹೇಳಿದ್ದಾರೆ.
ವರ್ಗಾವಣೆ ದಂಧೆ, ಲೈಸೆನ್ಸ್ ಮಂಜೂರಾತಿ, ಮದ್ಯದ ಅಂಗಡಿಗಳಿಂದ 'ಮಂಥ್ಲಿ ಮನಿ' ಸೇರಿದಂತೆ ಅಬಕಾರಿ ಸಚಿವರು ವರ್ಷಕ್ಕೆ ಸುಮಾರು 500 ಕೋಟಿ ರೂ. ಭ್ರಷ್ಟಾಚಾರ ಎಸಗುತ್ತಿದ್ದಾರೆ ಎಂದು ರಾಜ್ಯ ಮದ್ಯ ಮಾರಾಟಗಾರರ ಸಂಘ ಮಾಡಿರುವ ಆರೋಪ ಅತ್ಯಂತ ಗಂಭೀರವಾಗಿದ್ದು, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ಈ ಕೂಡಲೇ ಸಚಿವ ಸ್ಥಾನದಿಂದ ವಜಾ ಮಾಡಿ ಲೋಕಾಯುಕ್ತ ತನಿಖೆಗೆ ವಹಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಆರ್.ಅಶೋಕ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: 15 ಬಾರಿ ಬಜೆಟ್ ಮಂಡಿಸಿರುವೆ, ಮುಂದೆ ಮಂಡಿಸುತ್ತೇನೋ ಇಲ್ಲೋ ಗೊತ್ತಿಲ್ಲ: ಕುರುಬ ಸಮುದಾಯದ ಮುಖಂಡರ ಸಭೆಯಲ್ಲಿ ಸಿಎಂ