ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿ ಡಾಲಿ ಧನಂಜಯ್ ನಿರ್ಮಾಣ ಮಾಡುತ್ತಿರುವ 'ಬಡವ ರಾಸ್ಕಲ್' ಸಿನಿಮಾ ಈಗಾಗಲೇ ಮೊದಲನೇ ಹಂತದ ಶೂಟಿಂಗ್ ಮುಗಿಸಿದೆ. ಚಿತ್ರತಂಡ ಈಗ ಎರಡನೇ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು ಫೈಟಿಂಗ್ ಚಿತ್ರೀಕರಣ ಭರದಿಂದ ಸಾಗಿದೆ.
ಬೆಂಗಳೂರಿನ ಗವಿಪುರಂ ಬಳಿಯ ಗುಟ್ಟಳ್ಳಿಯಲ್ಲಿ ಧನಂಜಯ್ ಅಭಿನಯದ ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣ ಜರುಗುತ್ತಿದೆ. ಗವಿಗಂಗಾಧರೇಶ್ವರ ದೇವಸ್ಥಾನದ ಬಳಿ ಚಿತ್ರತಂಡ ಸೆಟ್ ಹಾಕಿ ಫೈಟ್ ಶೂಟಿಂಗ್ ಮಾಡಿದೆ. ನಡುಬೀದಿಯಲ್ಲೇ 'ಬಡವ ರಾಸ್ಕಲ್' ಡಾಲಿ ಧನಂಜಯ ವಿಲನ್ಗಳ ಜೊತೆ ಸೆಣಸಾಡಿದ್ದಾರೆ. ಇದು ಸಿನಿಮಾದ ಓಪನಿಂಗ್ ಸಾಹಸ ದೃಶ್ಯವಾಗಿದ್ದು ಫೈಟ್ ಮಾಸ್ಟರ್ ವಿನೋದ್ ಸಾಹಸ ನಿರ್ದೇಶನದಲ್ಲಿ ಧನಂಜಯ್ ರೌಡಿಗಳ ಜೊತೆ ಸೆಣಸಾಡುವುದನ್ನು ನಿರ್ದೇಶಕ ಶಂಕರ್ ಚಿತ್ರೀಕರಿಸಿಕೊಂಡರು. ಇದು ಶಂಕರ್ ನಿರ್ದೇಶನದ ಮೊದಲ ಸಿನಿಮಾ. ಇದೊಂದು ಪಕ್ಕಾ ಮನರಂಜನೆ ಸಿನಿಮಾವಾಗಿದ್ದು ಚಿತ್ರದಲ್ಲಿ ಡಾಲಿಗೆ ನಾಯಕಿಯಾಗಿ ಅಮೃತ ಅಯ್ಯಂಗಾರ್ ನಟಿಸಿದ್ದಾರೆ. 'ಪಾಪ್ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲಿ ಕೂಡಾ ಅಮೃತ ಧನಂಜಯ್ಗೆ ಜೋಡಿಯಾಗಿ ನಟಿಸಿದ್ದಾರೆ.