'ಅಥರ್ವ' ಚಿತ್ರದಲ್ಲಿ ನಾಯಕನಾಗಿ ಗಮನ ಸೆಳೆದಿದ್ದ ಅರ್ಜುನ್ ಸರ್ಜಾ ಅಳಿಯ ಪವನ್ ತೇಜ ಈಗ ಮತ್ತೆ 'ಕಂಸಾಳೆ' ಚಿತ್ರದ ಮೂಲಕ ಚಂದನವನದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಮೊದಲ ಚಿತ್ರದಲ್ಲಿ ಮಾಸ್ ಲುಕ್ನಲ್ಲಿ ಎಂಟ್ರಿ ಕೊಟ್ಟಿದ್ದ ಪವನ್ ತೇಜ 'ಕಂಸಾಳೆ' ಚಿತ್ರದಲ್ಲಿ ಪಕ್ಕಾ ಲವರ್ ಬಾಯ್ ಆಗಿ ಮಿಂಚಲು ರೆಡಿಯಾಗಿದ್ದು. ನಿನ್ನೆ ನಗರದ ಕಾಶಿ ವಿಶ್ವನಾಥ ದೇವಾಲಯದಲ್ಲಿ ಸಿನಿಮಾ ಸೆಟ್ಟೇರಿದೆ.
'ಕಂಸಾಳೆ' ಸಿನಿಮಾ ಹಳ್ಳಿ ಬ್ಯಾಕ್ಡ್ರಾಪ್ನಲ್ಲಿ ನಡೆಯುವ ಪ್ರೇಮಾ ಕಥಾ ಹಂದರ ಹೊಂದಿರುವ ಚಿತ್ರವಾಗಿದೆ. ಪ್ರಜ್ವಲ್ ದೇವರಾಜ್ ಅಭಿನಯದ 'ಭುಜಂಗ' ಚಿತ್ರವನ್ನು ನಿರ್ದೇಶಿಸಿದ್ದ ಜೀವಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾ ಚಿತ್ರೀಕರಣ ಚಿಕ್ಕಮಗಳೂರಿನ ಸುತ್ತ ಮುತ್ತ ನಡೆಯಲಿದ್ದು ಸದ್ಯ ಮಲೆನಾಡಿನಲ್ಲಿ ಮಳೆರಾಯನ ಅಬ್ಬರ ಜೋರಾಗಿದ್ದು ಮಳೆ ನಿಂತ ಮೇಲೆ ಶೂಟಿಂಗ್ ಶುರು ಮಾಡುವುದಾಗಿ ನಿರ್ದೇಶಕ ಜೀವಾ ಹೇಳಿದ್ದಾರೆ. ಚಿತ್ರದಲ್ಲಿ ನಾಯಕನದ್ದು ಮಧ್ಯಮ ವರ್ಗದ ಯುವಕನ ಪಾತ್ರವಾಗಿದ್ದು, ದುಷ್ಟರಿಗೆ ಸಿಂಹಸ್ವಪ್ನವಾಗಿ ಕಾಡುತ್ತಾನೆ. ಆದರೆ, ತಾನು ಪ್ರೀತಿಸಿದ ಹುಡುಗಿ ವಿಚಾರಕ್ಕೆ ಬಂದ್ರೆ ಮತ್ತ್ಯಾವ ಅವತಾರ ತಾಳಬಹುದೋ ಗೊತ್ತಿಲ್ಲ. ಅಂತಹ ಲವರ್ ಬಾಯ್ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಪವನ್ ತೇಜ ತಿಳಿಸಿದರು. 'ಅಥರ್ವ' ಚಿತ್ರದ ನಂತರ ಸುಮಾರು ಕಥೆಗಳನ್ನು ಕೇಳಿದ್ದೆ. ಅದರೆ ಈ ಕಥೆ ಬಹಳ ಇಷ್ಟವಾಯಿತು. ಹಾಗಾಗಿ 'ಕಂಸಾಳೆ ' ಚಿತ್ರಕ್ಕೆ ಒಕೆ ಅಂದೆ. ಈ ಚಿತ್ರದ ಟೈಟಲ್ಗೂ ಪಾತ್ರಗಳಿಗೂ ಹಾಗೂ ಕಥೆಗೂ ಹೇಗೆ ಹೊಂದಾಣಿಕೆ ಆಗುತ್ತದೆ ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು ಎಂದು ಪವನ್ ತೇಜ ಹೇಳಿದರು.
ಇನ್ನು ಚಿತ್ರದಲ್ಲಿ ನಾಯಕಿಯಾಗಿ ಮೈಸೂರು ಹುಡುಗಿ ನಯನಾ ನಟಿಸುತ್ತಿದ್ದು, ಶ್ರೀಮಂತನ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಡ ಹುಡುಗ ಶ್ರೀಮಂತ ಹುಡುಗಿ ನಡುವಿನ ಲವ್ ಸ್ಟೋರಿಯಲ್ಲಿ ಏನೆಲ್ಲಾ ತಿರುವು ಪಡೆದುಕೊಳ್ಳುತ್ತದೆ ಎಂಬುದು ಚಿತ್ರದ ಕಥೆಯಾಗಿದೆ. ಸಿನಿಮಾದಲ್ಲಿ ಕಲಾತಪಸ್ವಿ ಹಿರಿಯ ನಟ ರಾಜೇಶ್, ಪ್ರಮೀಳಾ ಜೋಷಾಯ್ , ಖಳನಟ ಶೋಭರಾಜ್ ಕೂಡಾ ನಟಿಸುತ್ತಿದ್ದಾರೆ. ಚಿತ್ರವನ್ನು ಎಸ್.ಚಂದ್ರ ಶೇಖರ್ ಹಾಗೂ ಲೋಕೇಶ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ.