ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅಕ್ಕ' ಧಾರಾವಾಹಿಯಲ್ಲಿ ಭೂಮಿಕಾ ಮತ್ತು ದೇವಿಕಾ ಎಂಬ ದ್ವಿಪಾತ್ರದಲ್ಲಿ ನಟಿಸಿ ಮನೆ ಮಾತಾಗಿರುವ ಅನುಪಮಾ ಗೌಡ, ಕೇವಲ ಕಿರುತೆರೆ ಮಾತ್ರವಲ್ಲದೆ ಬೆಳ್ಳಿತೆರೆಯಲ್ಲಿ ಗುರುತಿಸಿಕೊಂಡ ಪ್ರತಿಭೆ. ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದ ಅನುಪಮಾ ಗೌಡಗೆ ಬೆಳ್ಳಿತೆರೆಯಲ್ಲಿ ಬ್ರೇಕ್ ನೀಡಿದ್ದು ಆ ಕರಾಳ ರಾತ್ರಿ ಸಿನಿಮಾ.
ಆ ಕರಾಳ ರಾತ್ರಿಯ ಮೂಲಕ ಬೆಳ್ಳಿತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿರುವ ಅನುಪಮಾ ಗೌಡ ಇದೀಗ ಕ್ರೈಂ ಥ್ರಿಲ್ಲರ್ ಸಿನಿಮಾದ ಮೂಲಕ ಮಗದೊಮ್ಮೆ ಮನರಂಜನೆ ನೀಡಲು ಬರುತ್ತಿದ್ದಾರೆ. ಸುಜಯ್ ಶಾಸ್ತ್ರಿ ನಿರ್ದೇಶನದ 'ಚಾರ್ಲಿ ಅಲ್ಫಾ ಟ್ಯಾಂಗೋ' ಸಿನಿಮಾದಲ್ಲಿ ನಾಯಕಿಯಾಗಿ ಅನುಪಮಾ ಗೌಡ ಕಾಣಿಸಿಕೊಳ್ಳಲಿದ್ದಾರೆ.'ಲಂಕೇಶ್ ಪತ್ರಿಕೆ' ಸಿನಿಮಾದಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದ ಅನುಪಮಾ 'ನಗಾರಿ' ಸಿನಿಮಾದಲ್ಲಿ ಅಭಿನಯಿಸಿದ್ದರು. ಆದರೆ ಅದು ಅವರಿಗೆ ಜನಪ್ರಿಯತೆ ಕೊಡಲಿಲ್ಲ. 'ಹಳ್ಳಿ ದುನಿಯಾ' ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ಅನುಪಮಾ, ಚಿ.ಸೌ. ಸಾವಿತ್ರಿ ಧಾರಾವಾಹಿಯಲ್ಲಿ ನಟಿಸಿದ್ರೂ ಅವರಿಗೆ ಬ್ರೇಕ್ ನೀಡಿದ್ದು 'ಅಕ್ಕ' ಧಾರಾವಾಹಿ. 'ಆ ಕರಾಳ ರಾತ್ರಿ' ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಇವ್ರು ಮುಂದೆ ದಯಾಳ್ ತ್ರಯಂಬಕಂ, ಬೆಂಕಿಯಲ್ಲಿ ಅರಳಿದ ಹೂವು, ದಿ ಫಾಲನ್ ಸಿನಿಮಾಗಳಲ್ಲಿ ನಟಿಸಿದ್ದು, ಕನ್ನಡ ಕೋಗಿಲೆ ಮತ್ತು ಮಜಾ ಭಾರತ ಕಾರ್ಯಕ್ರಮದ ನಿರೂಪಕಿಯಾಗಿಯೂ ಮೋಡಿ ಮಾಡಿದ್ದಾರೆ.