ದಾವಣಗೆರೆ; ಜಾನಪದ ಸಂಸ್ಕೃತಿ ಹಾಗೂ ಗ್ರಾಮ ಸೌಂದರ್ಯವನ್ನೇ ಉದ್ದೇಶವನ್ನಾಗಿಟ್ಟುಕೊಂಡು ಪಕ್ಕಾ ಹಳ್ಳಿ ಸೊಗಡಿನ ಕಥೆಯಾದ 'ಆನೆಬಲ' ಸಿನಿಮಾ ಫೆಬ್ರವರಿ 21ರಂದು ತೆರೆಗೆ ಬರಲಿದೆ ಎಂದು ಸಿನಿಮಾ ನಿರ್ದೇಶಕ ಸೂನಗಹಳ್ಳಿ ರಾಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಆನೆಬಲ' ಸಿನಿಮಾ ಪಕ್ಕಾ ಹಳ್ಳಿ ಕಥೆಯಾಗಿದೆ. ಈ ಚಿತ್ರದಲ್ಲಿ ಜನಪದ ಸಂಸ್ಕೃತಿ, ಸೋಬಾನೆ ಪದಗಳ ಬಳಕೆ, ಹಳ್ಳಿ ಸೊಗಡನ್ನು ಬೇರೆ ಬೇರೆ ಆಯಾಮಗಳಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಯುವ ಜನತೆಯನ್ನು ಸಮಾಜ ಕಟ್ಟುವ ಕೆಲಸಕ್ಕೆ ಹೇಗೆ ಬಳಸಿಕೊಳ್ಳಬೇಕು ಎಂಬ ಅಂಶವನ್ನು ತೋರಿಸಲಾಗಿದೆ. ನಾಯಕನಾಗಿ ಸಾಗರ್, ನಾಯಕಿಯಾಗಿ ರಕ್ಷಿತಾ ಸೇರಿದಂತೆ 120 ಕ್ಕೂ ಹೆಚ್ಚು ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ ಎಂದು ತಿಳಿಸಿದರು.
ಇನ್ನು 'ಮುದ್ದೆ ಮುದ್ದೆ ರಾಗಿ ಮುದ್ದೆ' ಹಾಡು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹಿಟ್ ಆಗಿದೆ. ಫೆಬ್ರವರಿ ಮೊದಲ ವಾರದಲ್ಲಿ ಟ್ರೇಲರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಲಿದ್ದಾರೆ. ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ಆನೆಬಲ' ಪೋಸ್ಟರ್ ರಿಲೀಸ್ ಮಾಡಿದ್ದು, ಫೆಬ್ರವರಿ 21ರಂದು ಸಿನಿಮಾ ತೆರೆಗೆ ಬರಲಿದೆ. ಹೊಸಬರ ಸಿನಿಮಾಕ್ಕೆ ಪ್ರೋತ್ಸಾಹಿಸಿ ಎಂದು ಪ್ರೇಕ್ಷಕರಲ್ಲಿ ಚಿತ್ರತಂಡ ಮನವಿ ಮಾಡಿದೆ.