ಕನ್ನಡ ಚಿತ್ರರಂಗದಲ್ಲಿ ಫಿಲಂ ಫ್ಯಾಕ್ಟರಿ ಎಂದೇ ಖ್ಯಾತಿಯಾಗಿದ್ದ ನಿರ್ಮಾಪಕ ಅಣಜಿ ನಾಗರಾಜ್ ಮೂರು ವರ್ಷಗಳಿಂದ ಚಿತ್ರರಂಗದಿಂದ ಸ್ವಲ್ಪ ದೂರ ಉಳಿದಿದ್ದರು. ಅನಾರೋಗ್ಯದಿಂದ ಚಿತ್ರ ನಿರ್ಮಾಣದಿಂದ ದೂರ ಉಳಿದಿದ್ದ ಅಣಜಿ ನಾಗರಾಜ್, ಈಗ ಮತ್ತೆ ರೀ ಎಂಟ್ರಿ ಕೊಟ್ಟಿದ್ದಾರೆ.
ಆದರೆ ಈಗ ಅಣಜಿ ನಾಗರಾಜ್ ನಿರ್ಮಾಪಕರಾಗಿ ಚಿತ್ರರಂಗಕ್ಕೆ ವಾಪಸ್ ಬಂದಿಲ್ಲ. ಬದಲಾಗಿ ಕ್ಯಾಮರಾಮ್ಯಾನ್ ಆಗಿ ಬಂದಿದ್ದಾರೆ. ಹೌದು, ಚಿತ್ರರಂಗಕ್ಕೆ ಯೂನಿಟ್ ಜನರೇಟರ್ ಕ್ಲೀನರ್ ಆಗಿ ಎಂಟ್ರಿ ಕೊಟ್ಟಿದ್ದ ಅಣಜಿ ನಾಗಾರಾಜ್, ಕ್ಯಾಮರಾ ಕೆಲಸದಲ್ಲಿ ಆಸಕ್ತಿ ಇದ್ದುದರಿಂದ ಕ್ಯಾಮರಾಮ್ಯಾನ್ ಆಗಿ ಬಡ್ತಿ ಪಡೆದ ಅವರು ಸಾಕಷ್ಟು ಹಿಟ್ ಚಿತ್ರಗಳಿಗೆ ಕ್ಯಾಮರಾ ವರ್ಕ್ ಮಾಡಿದ್ದಾರೆ.
ಚಿತ್ರರಂಗದಲ್ಲಿ ಶ್ರದ್ಧೆಯಿಟ್ಟು ಕೆಲಸ ಮಾಡಿದ ಅಣಜಿ, ತುಂಬಾ ಕಡಿಮೆ ಅವಧಿಯಲ್ಲಿ ನಿರ್ಮಾಪಕರಾಗಿಯೂ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರ ಹೆಸರಲ್ಲಿದೆ. ವಿಶೇಷ ಅಂದ್ರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿದ ಕೀರ್ತಿ ಅಣಜಿ ನಾಗರಾಜ್ಗೆ ಸಲ್ಲುತ್ತದೆ. ಇದರ ಜೊತೆಗೆ ಶಿವಣ್ಣನ ಜೊತೆ ಸುಗ್ರೀವ ಚಿತ್ರವನ್ನು 24 ಗಂಟೆಯೊಳಗೆ ಶೂಟಿಂಗ್ ಕಂಪ್ಲೀಟ್ ಮಾಡಿದ ರೆಕಾರ್ಡ್ ಕೂಡ ಅಣಜಿ ಅಕೌಂಟ್ನಲ್ಲಿ ಇದೆ.
2017ರಲ್ಲಿ ದುನಿಯಾ ವಿಜಯ್ ಅಭಿನಯದ ಭೀಮಾತೀರದಲ್ಲಿ ಚಿತ್ರ ನಿರ್ಮಾಣ ಮಾಡಿ, ಕ್ಯಾಮರಾ ವರ್ಕ್ ಮಾಡಿದ್ದ ಅಣಜಿ ದಿಢೀರನೇ ಅನಾರೋಗ್ಯಕ್ಕೆ ತುತ್ತಾಗಿ ಚಿತ್ರರಂಗದಿಂದ ದೂರ ಉಳಿದರು. ಅಲ್ಲದೆ ಆರ್ಥಿಕ ಸಮಸ್ಯೆಯು ಅಣಜಿ ನಾಗರಾಜ್ ಅವರನ್ನು ಕುಗ್ಗಿಸಿ ಬಿಟ್ಟಿತು. ಅದ್ರೆ ಇದ್ಯಾವುದಕ್ಕೂ ಜಗ್ಗದ ಅಣಜಿ ನಾಗರಾಜ್ ಈಗ ಮತ್ತೆ ಚಿತ್ರರಂಗಕ್ಕೆ ವಾಪಸ್ಸಾಗಿದ್ದು, ಧೂಮ್ ಚಿತ್ರದಲ್ಲಿ ಕ್ಯಾಮರಾಮ್ಯಾನ್ ಆಗಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಇದಲ್ಲದೆ ದರ್ಶನ್ ಅವರ ಆತ್ಮೀಯರಾಗಿರುವ ಅಣಜಿ ಮತ್ತೆ ದರ್ಶನ್ ಚಿತ್ರ ನಿರ್ಮಾಣ ಮಾಡುವ ಆಲೋಚನೆಯಲ್ಲಿ ಇದ್ದಾರೆ. ಆದರೆ ಇದೆಲ್ಲದರ ಮುಂಚೆ ಇಂಡಸ್ಟ್ರಿಯಲ್ಲಿ ಕ್ಯಾಮರಾಮ್ಯಾನ್ ಆಗಿ ಕೆಲಸ ಮಾಡುವ ಆಸೆಯೊಂದಿಗೆ ಈಗ ಅಣಜಿ ಚಿತ್ರರಂಗಕ್ಕೆ ಬಂದಿದ್ದಾರೆ. ಸಾಕಷ್ಟು ನೋವು ಉಂಡಿರುವ ಅಣಜಿ, ಇಂಡಸ್ಟ್ರಿಯಲ್ಲಿ ಕಾಣಿಸದಿದ್ದರೆ ನಮಗೆ ಬೆಲೆ ಇಲ್ಲ. ಚಿತ್ರರಂಗದಲ್ಲಿ ಸಕ್ರಿಯವಾಗಿ ಇದ್ದರೆ ಮಾತ್ರ ಗಾಂಧಿನಗರದ ಮಂದಿ ನಮಗೆ ಬೆಲೆ ಕೊಡ್ತಾರೆ. ಇಲ್ಲದಿದ್ದರೆ ಯಾರು ಕೂಡ ನಮ್ಮ ಕಡೆ ನೋಡಲ್ಲ ಎಂಬ ನೋವಿನ ಮಾತುಗಳನ್ನಾಡಿದ್ದಾರೆ.
ಧೂಮ್ ಚಿತ್ರದ ಜೊತೆ ಇನ್ನೂ ಎರಡು ಚಿತ್ರಗಳ ಮಾತುಕತೆ ಆಗಿದೆ. ಅದ್ರೆ ಸದ್ಯಕ್ಕೆ ನನ್ನ ಗಮನ ಧೂಮ್ ಚಿತ್ರವಾಗಿದೆ. ಈ ಚಿತ್ರ ಐದು ಭಾಷೆಯಲ್ಲಿ ಬರ್ತಿದ್ದು, ಕ್ಯಾಮರಾ ವರ್ಕ್ನಲ್ಲಿ ಏನಾದ್ರು ಹೊಸದನ್ನು ಕೊಡೋ ಪ್ಲಾನ್ನಲ್ಲಿ ಇದ್ದೀನಿ ಎಂದು ಅಣಜಿ ನಾಗರಾಜ್ ಹೇಳಿದ್ದಾರೆ.