ಕನ್ನಡ ಚಿತ್ರರಂಗದ ಹಿರಿಯಣ್ಣ ರೆಬಲ್ ಸ್ಟಾರ್ ಅಂಬರೀಶ್ ಅಗಲಿ ಇಂದಿಗೆ ಎರಡು ವರ್ಷಗಳು ತುಂಬಿದೆ. ಅಂಬರೀಶ್ 2ನೇ ವರ್ಷದ ಪುಣ್ಯಸ್ಮರಣೆಯಂದು ಸುಮಲತಾ ಅಂಬರೀಶ್ ತಮ್ಮ ಕುಟುಂಬದ ಸದಸ್ಯರು ಹಾಗೂ ಚಿತ್ರರಂಗದ ಆಪ್ತರೊಂದಿಗೆ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿ ಬಂದಿದ್ದಾರೆ. ದರ್ಶನ್ ಕೂಡಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಂಬರೀಶ್ ಜೊತೆ ಇರುವ ಫೋಟೋವನ್ನು ಹಾಕಿ ಅಂಬಿಯನ್ನು ಸ್ಮರಿಸಿದ್ದಾರೆ.
ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್ ಅವರೊಂದಿಗೆ ನಟ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ, ಜೈ ಜಗದೀಶ್, ವಿಜಯಲಕ್ಷ್ಮಿ ಸಿಂಗ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಗೋಪಾಲಯ್ಯ ಹಾಗೂ ಇನ್ನಿತರರು ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಸುಮಲತಾ ಅಂಬರೀಶ್, "ನಮ್ಮ ಯಜಮಾನರು ಎಲ್ಲರನ್ನೂ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಿದ್ದರು.ಹಾಗೇ ಎಲ್ಲರ ಪ್ರೀತಿ ಗಳಿಸಿ ಅದನ್ನು ಶಾಶ್ವತವಾಗಿ ಉಳಿಸಿಕೊಂಡಿದ್ದಾರೆ,ಇದಕ್ಕಿಂತ ಹೆಮ್ಮೆ ಯಾವುದೂ ಇಲ್ಲ, ಮಂಡ್ಯದಲ್ಲಿ ನಿಜಕ್ಕೂ ಅಂಬಿ ಗುಡಿ ಕಟ್ಟಿರುವುದು ಅದ್ಭುತ,ಆ ಊರಿನವರು ನನ್ನಿಂದ ಯಾವುದೇ ಸಹಾಯ ಕೇಳದೆ ಇರುವುದು ನನಗೆ ಆಶ್ಚರ್ಯವಾಗಿದೆ.ಅಂಬರೀಶ್ ಇದ್ದಾಗ ಪ್ರತಿದಿನ ಜನರ ಮಧ್ಯೆ ಇರುತ್ತಿದ್ದರು. ಮಂಡ್ಯ ಜನ ಅವರನ್ನು ದೇವರಂತೆ ಪೂಜಿಸುತ್ತಿದ್ದರು. ಹೀಗಾಗಿ ಜನರು ಅವರಿಗೆ ಮನಸ್ಸಿನಲ್ಲೇ ಗುಡಿ ಕಟ್ಟಿಕೊಂಡಿದ್ದಾರೆ. ಸ್ಮಾರಕಕ್ಕೆ ಈಗಷ್ಟೇ ಟ್ರಸ್ಟ್ ರಿಜಿಸ್ಟರ್ ಆಗಿದೆ. ಯಾವ ರೀತಿ ಡಿಸೈನ್ ಮಾಡಬೇಕು ಅನ್ನೋದನ್ನು ಮೀಟಿಂಗ್ ಮಾಡಿ ನಂತರ ನಿರ್ಧರಿಸುತ್ತೇವೆ ಎಂದರು".
ಬೆಂಗಳೂರಿನಲ್ಲಿ ಪೂಜೆ ಕಾರ್ಯಕ್ರಮದ ನಂತರ ಮಂಡ್ಯಗೆ ತೆರಳಿ ಮದ್ದೂರಿನ ಹೊಟ್ಟೇಗೌಡನದೊಡ್ಡಿಯಲ್ಲಿ ಅಂಬರೀಶ್ ಅವರ ಕಂಚಿನ ಪುತ್ಥಳಿ ಅನಾವರಣ ಮಾಡಲಿದ್ದಾರೆ. ಅಲ್ಲಿಂದ ಅಂಬರೀಶ್ ಹುಟ್ಟೂರಾದ ದೊಡ್ಡರಸಿನಕೆರೆ ಗ್ರಾಮಕ್ಕೆ ಭೇಟಿ ನೀಡಲಿದ್ದು, ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದ ಅಡಿಯಲ್ಲಿ ವಿಕಲಚೇತನರಿಗೆ ಯಂತ್ರಚಾಲಿತ ತ್ರಿಚಕ್ರ ವಾಹನ ವಿತರಣೆ ಮಾಡಲಿದ್ದಾರೆ.
ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದರ್ಶನ್ ಮಾತನಾಡಿ, "ಅಂಬಿ ಅಪ್ಪಾಜಿ ಬೈಗುಳವನ್ನು ನಾನು ಮಿಸ್ ಮಾಡಿಕೊಳ್ತಿದ್ದೀನಿ.ಅವರು ದಿನದ 24 ಗಂಟೆ ನಮ್ಮೊಂದಿಗೆ ಇರುತ್ತಿದ್ದರು. ದೈಹಿಕವಾಗಿ ಅಗಲಿದ್ದರೂ ಮಾನಸಿಕವಾಗಿ ನಮ್ಮೊಂದಿಗೆ ಇದ್ದಾರೆ. ಈ ಸಮಾಧಿ ನಮಗೆ ದೇವಸ್ಥಾನ ಇದ್ದ ಹಾಗೆ. ನಾನು ಇಲ್ಲಿಗೆ ಬರುತ್ತಲೇ ಇರುತ್ತೇನೆ. ಅವರನ್ನು ನಾನು ದೇವರಂತೆ ಪೂಜಿಸುತ್ತೇನೆ. ಅವರ ಅನುಪಸ್ಥಿತಿ ತುಂಬಾನೇ ಕಾಡ್ತಿದೆ" ಎಂದು ಅಂಬಿಯನ್ನು ನೆನೆದರು.