ಬೆಂಗಳೂರಿನ ನಂದಿನಿ ಬಡಾವಣೆಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಸುಸಜ್ಜಿತ ಕಟ್ಟಡ ಹಾಗೂ ಕಚೇರಿಯನ್ನು ಹೊಂದಿದೆ. 26 ಜುಲೈ 2009 ರಲ್ಲಿ ಸ್ಥಾಪನೆ ಆದ ಈ ಅಕಾಡೆಮಿಗೆ ಟಿ.ಎಸ್. ನಾಗಾಭರಣ ಮೊದಲ ಅಧ್ಯಕ್ಷರಾಗಿದ್ದರು. ಈ ಸಮಯದಲ್ಲಿ ಘೋಷಣೆಯಾದ ಕೋಟಿ ರೂಪಾಯಿ ವೆಚ್ಚದಲ್ಲಿ ಕೆಸಿಎ ಡಿಜಿಟಲೀಕರಣವಾಗಲು ಸಿದ್ಧವಾಗುತ್ತಿದೆ.
ಟಿ.ಎಸ್. ನಾಗಾಭರಣ ಕೆಸಿಎ ಅಧ್ಯಕ್ಷರಾದ ನಂತರ ಬಿಡಿಎ ಒಂದು ಕೋಟಿ ರೂಪಾಯಿ ಅನೌನ್ಸ್ ಮಾಡಿತ್ತು. ಇದಕ್ಕೂ ಮುನ್ನ ಬೆಂಗಳೂರು ಸಿಟಿ ಕಾರ್ಪೊರೇಷನ್ ಎದುರು ಕಚೇರಿ ಇತ್ತು. ನಾಗಾಭರಣ ನಂತರ ತಾರಾ ಅನುರಾಧ, ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ನಾಗತಿಹಳ್ಳಿ ಚಂದ್ರಶೇಖರ್ ಕೂಡಾ ಕೆಸಿಎ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಆದರೂ ಈ ಡಿಜಿಟಲೀಕರಣ ವ್ಯವಸ್ಥೆ ಸರಿಯಾಗಿ ಆರಂಭವಾಗುತ್ತಿರುವುದು ಪ್ರಸ್ತುತ ಅಧ್ಯಕ್ಷರಾಗಿರುವ ಸುನಿಲ್ ಪುರಾಣಿಕ್ ಸಮಯದಲ್ಲಿ ಎನ್ನಬಹುದು.
ಡಿಜಿಟಲೀಕರಣ ಗ್ರಂಥಾಲಯಕ್ಕೆ ಸಾರ್ವಜನಿಕರನ್ನು ಕೂಡಾ ಆಹ್ವಾನಿಸುವ ಉದ್ದೇಶ ಕೆಸಿಎಗೆ ಇದೆ ಎನ್ನಲಾಗಿದೆ. ಸಿನಿಮಾಗೆ ಸಂಬಂಧಪಟ್ಟ ಎಲ್ಲಾ ವಿಚಾರಗಳು ಇಲ್ಲಿ ಲಭ್ಯ ಆಗುವಂತೆ ವ್ಯವಸ್ಥೆ ಮಾಡುವುದರೊಂದಿಗೆ ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್ ಮಾದರಿಯಲ್ಲಿ ಇದು ಉದ್ಘಾಟನೆ ಆಗಬೇಕು ಎಂಬುದು ಸುನಿಲ್ ಪುರಾಣಿಕ್ ಅವರ ಚಿಂತನೆ. ಸಿನಿಮಾಗೆ ಸಂಬಂಧಿಸಿದ ಪುಸ್ತಕಗಳು, ಸಿನಿಮಾ ಸ್ಕ್ರಿಪ್ಟ್, ಸಂಭಾಷಣೆ, ಬರಹಗಳು, ಪುರಾತನವಾದ ಕಲಾಕೃತಿಗಳು ಅಲ್ಲದೆ ಕನ್ನಡದ 4000ಕ್ಕೂ ಹೆಚ್ಚು ಸಿನಿಮಾಗಳ ಡಿಜಿಟಲಿಕರಣ ಮಾಡಿ ಇಲ್ಲಿ ಸಂಗ್ರಹಿಸಲಾಗುವುದು. ಕಳೆದ 11 ವರ್ಷಗಳಿಂದ ಸಂಗ್ರಹ ಮಾಡಿದ ವಸ್ತುಗಳು ಈಗ ಹೊಸ ಕಟ್ಟಡದಲ್ಲಿ ಸೇರಿದ್ದು ಎಸಿ ರೂಮ್ ಕೂಡಾ ಸಿದ್ದವಾಗಿದೆ ಎನ್ನಲಾಗಿದೆ.
ಖ್ಯಾತ ಸಾಹಿತಿ ಚಿ.ಉದಯಶಂಕರ್ ಅವರ ಮನೆಯಲ್ಲಿ ಇದ್ದ ಪುಸ್ತಕಗಳು ಹಾಗೂ ಇತರ ದಿಗ್ಗಜರ ಬಳಿ ಇದ್ದ ಪುಸ್ತಕಗಳು ಕೆಸಿಎನಲ್ಲಿ ಸಂಗ್ರಹ ಆಗಿದೆ. ಸಾರ್ವಜನಿಕರು ಕೂಡಾ ತಮ್ಮಲ್ಲಿ ಲಭ್ಯ ಇರುವ ಅಮೂಲ್ಯ ಪುಸ್ತಕಗಳನ್ನು ಈ ಲೈಬ್ರರಿಗೆ ಕೊಡಬಹುದು. ಒಟ್ಟಿನಲ್ಲಿ ಒಂದು ಸಿನಿಮಾ ಬಗ್ಗೆ ತಿಳಿದುಕೊಳ್ಳಲು ಯಾವ ಕೊರತೆಯೂ ಇರಬಾರದು ಎಂಬುದು ಸುನಿಲ್ ಪುರಾಣಿಕ್ ಅವರ ಉದ್ದೇಶ ಎನ್ನಲಾಗಿದೆ.