ಬಹುಶಃ ಇಡೀ ದೇಶದಲ್ಲಿ ಬ್ಯುಸಿಯಾಗಿರುವ ನಟ ಎಂದರೆ ಅದು ಅಕ್ಷಯ್ ಕುಮಾರ್ ಒಬ್ಬರೇ ಇರಬೇಕು. ಅಕ್ಷಯ್ ಅಭಿನಯದ ಸೂರ್ಯವಂಶಿ, ಬೆಲ್ಬಾಟಂ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಬಚ್ಚನ್ ಪಾಂಡೆ, ಅತರಂಗಿ ರೇ ಮತ್ತು ಪೃಥ್ವಿರಾಜ್ ಚಿತ್ರಗಳ ಚಿತ್ರೀಕರಣವನ್ನು ಅವರು ಮುಗಿಸಿದ್ದು, ಆ ಚಿತ್ರಗಳು ಮುಂದಿನ ವರ್ಷ ಬಿಡುಗಡೆಯಾಗಲಿವೆ.
ಇನ್ನು ರಾಮ್ ಸೇತು ಮತ್ತು ರಕ್ಷಾ ಬಂಧನ್ ಎಂಬ ಎರಡು ಚಿತ್ರಗಳ ಚಿತ್ರೀಕರಣದಲ್ಲಿ ಅಕ್ಷಯ್ ತೊಡಗಿಸಿಕೊಂಡಿದ್ದು, ಆ ಚಿತ್ರಗಳ ಚಿತ್ರೀಕರಣ ಸಹ ಇದೇ ವರ್ಷ ಮುಗಿಯಲಿವೆ. ಈ ಮಧ್ಯೆ, ಅಕ್ಷಯ್ ಇನ್ನೂ ಒಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ವಿಶೇಷವೆಂದರೆ, ಲಕ್ಷ್ಮೀ ನಂತರ ಅಕ್ಷಯ್ ಯಾವೊಂದು ರೀಮೇಕ್ ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ.
ಇದೀಗ ತಮಿಳಿನ ಜನಪ್ರಿಯ ಚಿತ್ರ 'ರಾಕ್ಷಸನ್' ಹಿಂದಿಗೆ ರಿಮೇಕ್ ಆಗುತ್ತಿದ್ದು, ಅದರಲ್ಲಿ ಇನ್ಸ್ಪೆಕ್ಟರ್ ಪಾತ್ರವನ್ನು ಅಕ್ಷಯ್ ಕುಮಾರ್ ನಿಭಾಯಿಸಲಿದ್ದಾರೆ. ಚಿತ್ರಕ್ಕೆ 'ಮಿಷನ್ ಸಿಂಡ್ರೆಲಾ' ಎಂದು ಹೆಸರಿಡಲಾಗಿದೆ. ಅಕ್ಷಯ್ಗೆ ನಾಯಕಿಯಾಗಿ ರಾಕುಲ್ ಪ್ರೀತ್ ಸಿಂಗ್ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ವರ್ಷಾಂತ್ಯಕ್ಕೆ ಸೆಟ್ಟೇರಲಿದೆ ಜಲಿಯನ್ವಾಲಾ ಬಾಗ್, ಶಂಕರನ್ ನಾಯರ್ ಬಯೋಪಿಕ್
ಬೆಲ್ ಬಾಟಂ ನಿರ್ಮಾಪಕ ಜಾಕಿ ಭಗ್ನಾನಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಆಗಸ್ಟ್ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ರಂಜಿತ್ ತಿವಾರಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದೊಂದು ಕಡಿಮೆ ಬಜೆಟ್, ಕಡಿಮೆ ಅವಧಿಯಲ್ಲಿ ಚಿತ್ರೀಕರಣವಾಗಲಿರುವ ಚಿತ್ರ. ಇದಕ್ಕಾಗಿ 40 ದಿನಗಳ ಕಾಲ್ಶೀಟ್ ಕೊಟ್ಟಿದ್ದಾರಂತೆ ಅಕ್ಷಯ್.
ಆಗಸ್ಟ್ನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾದರೆ, ಅಕ್ಟೋಬರ್ ಹೊತ್ತಿಗೆ ಮುಗಿಯಲಿದೆ. ಅದರ ನಂತರ ಅಕ್ಷಯ್ ಇನ್ಯಾವ ಚಿತ್ರಕ್ಕೆ ಹಾರುತ್ತಾರೋ ಎಂಬ ಕುತೂಹಲ ಎಲ್ಲರಿಗೂ ಇದೆ. ಸದ್ಯ ಅಕ್ಷಯ್ ತಮ್ಮ ಮುಂದಿನ ಚಿತ್ರ ಯಾವುದು ಎಂದು ಇನ್ನೂ ಹೇಳಿಕೊಂಡಿಲ್ಲ.