ಚೆನ್ನೈ (ತಮಿಳು ನಾಡು): ರಜನಿಕಾಂತ್ ರಾಜಕೀಯ ಸೇರುವುದಿಲ್ಲ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಅದರ ಜೊತೆಗೆ ರಜನಿಕಾಂತ್ ಮೇಲೆ ಭಾರಿ ಭರವಸೆ ಹೊಂದಿದ್ದ ಬಿಜೆಪಿ ಪಕ್ಷಕ್ಕೂ ತೀವ್ರ ನಿರಾಸೆಗೊಂಡಿದೆ.
ರಜನಿಕಾಂತ್ ಆಸ್ಪತ್ರೆಗೆ ದಾಖಲಾದಾಗಿನಿಂದ ಮತ್ತು ಅವರ ಇತ್ತೀಚಿನ ಪ್ರಾಜೆಕ್ಟ್ ಅಣ್ಣಾಥೆ ಚಿತ್ರದ ಚಿತ್ರೀಕರಣವನ್ನು ನಿಲ್ಲಿಸಿದಾಗಿನಿಂದಲೂ, 'ತಲೈವಾರ್' ಹೊಸ ವರ್ಷದ ಮುನ್ನಾದಿನದಂದು ತಮ್ಮ ಪಕ್ಷದ ನಾಮಕರಣ ಮತ್ತು ಮುಂದಿನ ಕಾರ್ಯಕ್ರಮಗಳನ್ನು ಘೋಷಿಸುವ ಕುರಿತು ಸಂದೇಹಗಳು ಹುಟ್ಟಿಕೊಂಡಿದ್ದವು. ಇದೀಗ ರಜನಿಕಾಂತ್ ರಾಜಕೀಯಕ್ಕೆ ವಿದಾಯ ಹೇಳುವ ಮೂಲಕ ಎಲ್ಲಾ ಸಂದೇಹಗಳಿಗೆ ತೆರೆ ಎಳೆದಿದ್ದಾರೆ.
ರಜನಿಕಾಂತ್ ಬಿಜೆಪಿಗೆ ಬೆಂಬಲ ನೀಡಬಹುದು ಎಂಬ ಊಹೆಗಳು ಎದ್ದಿದ್ದವು. ಹೀಗಾಗಿ ಈ ಹಠಾತ್ ಮತ್ತು ಅನಿರೀಕ್ಷಿತ ಬೆಳವಣಿಗೆ ಬಿಜೆಪಿಗೂ ಶಾಕ್ ನೀಡಿದೆ.
ಬಿಜೆಪಿ ರಾಜ್ಯ ಅಧ್ಯಕ್ಷ ಎಲ್ ಮುರುಗನ್ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಕೇಂದ್ರದ ಮಾಜಿ ರಾಜ್ಯ ಸಚಿವ ಮತ್ತು ಪಕ್ಷದ ಹಿರಿಯ ನಾಯಕ ರಾಧಾಕೃಷ್ಣ ಅವರು ತಮ್ಮ ನಿರಾಸೆಯನ್ನು ಬಹಿರಂಗಪಡಿಸಿದ್ದಾರೆ.
"ಇದು ಜನರಿಗೆ ಹೆಚ್ಚು ನಿರಾಶಾದಾಯಕವಾಗಿದೆ. ಆದರೂ ನಾವು ರಜನಿಕಾಂತ್ ಅವರ ನಿರ್ಧಾರವನ್ನು ಒಪ್ಪಿಕೊಳ್ಳಬೇಕಾಗಿದೆ. ಇದು ಕೇಸರಿ ಪಕ್ಷದ ಮೇಲೆ ಪರಿಣಾಮ ಬೀರುವುದಿಲ್ಲ" ಎಂದು ರಾಧಾಕೃಷ್ಣನ್ ಸ್ಪಷ್ಟನೆ ನೀಡಿದ್ದಾರೆ.