ಅದಿತಿ ಪ್ರಭುದೇವ ಮರಾಠಿ ಚಿತ್ರರಂಗಕ್ಕೆ ಹೋಗ್ತಾರೆ ಎಂದು ಸುದ್ದಿ ಹಬ್ಬಿತ್ತು. ಈ ಕುರಿತು ಕನ್ನಡದ ಗ್ಲಾಮರ್ ಬೆಣ್ಣೆ ಶಾನೇ ಟಾಪಾಗವ್ಳೇ ಅದಿತಿಯವರೇ ಪ್ರತಿಕ್ರಿಯೆ ನೀಡಿದ್ದಾರೆ.
ಮರಾಠಿ ಚಿತ್ರದಲ್ಲಿ ನಟಿಸುವ ಕುರಿತು ಹಬ್ಬಿರುವ ಗಾಳಿಸುದ್ದಿಗೆ ಇದೀಗ ಅದಿತಿ ಪ್ರಭುದೇವ ಬ್ರೇಕ್ ಹಾಕಿದ್ದಾರೆ. ನನಗೆ ಮರಾಠಿಯಿಂದ ಆಫರ್ ಇರುವುದು ನಿಜ. ಆದರೆ, ನಾನು ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಬ್ಯುಸಿಯಾಗಿರುವೆ. ಬೇರೆ ಭಾಷೆಗೆ ಹೋಗುವುದಿಲ್ಲ. ಕನ್ನಡದಲ್ಲೇ ನೆಮ್ಮದಿಯಾಗಿದ್ದೇನೆ ಎಂದು ಸ್ಯಾಂಡಲ್ವುಡ್ನ ಟಾಪ್ ಸುಂದರಿ ಸ್ಪಷ್ಟಪಡಿಸಿದರು.
ನಾನು ಯಾವಾಗಲೂ ಒಳ್ಳೆಯ ಪಾತ್ರಗಳನ್ನು ಮಾಡಬೇಕು ಅಂತಾ ಅಂದುಕೊಳ್ಳುತ್ತಿದ್ದೆ. ಯಾಕಂದ್ರೆ, ಹತ್ತು ವರ್ಷ ಬಿಟ್ಟು ಆ ಸಿನಿಮಾ ನೋಡಿದ್ರೆ ಒಳ್ಳೆ ಪಾತ್ರ ಮಾಡಿದ್ದಾರೆ ಅಂತಾ ಹೇಳಬೇಕು. ಅದೇ ರೀತಿ ಈ ವರ್ಷವೂ ಒಳ್ಳೆಯ ಪಾತ್ರ ಮಾಡ್ತಿದ್ದೀನಿ. 'ತೋತಾಪುರಿ' ಚಿತ್ರದಲ್ಲಿ ಮುಸ್ಲಿಂ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೀನಿ. ಅಲ್ಲದೆ ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸುತ್ತಿದ್ದು ಅದರಲ್ಲೂ ತುಂಬಾ ವಿಭಿನ್ನ ಪಾತ್ರ ಮಾಡುತ್ತಿದ್ದೇನೆ ಎಂದರು.