ಕೊರೊನ ಲಾಕ್ಡೌನ್ ನಂತರ ಮತ್ತೆ ಚಿತ್ರರಂಗದಲ್ಲಿ ಹೊಸ ಬೆಳಕು ಮೂಡಿದೆ. ಸ್ಟಾರ್ ನಟರ ಚಿತ್ರಗಳು ಶೂಟಿಂಗ್ ಶುರು ಮಾಡಿದ್ರೆ, ಹೊಸಬರ ಚಿತ್ರಗಳು ಸದ್ದಿಲ್ಲದೆ ಸೆಟ್ಟೇರ್ತಿವೆ. ಇವುಗಳ ನಡುವೆ ಗೌರಿ ಗಣೇಶ ಹಬ್ಬಕ್ಕೆ ದೊಡ್ಮನೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.
ಅದೇನಪ್ಪ ಅಂದ್ರೆ ರಾಘವೇಂದ್ರ ರಾಜಕುಮಾರ್ ಅಭಿನಯದ 'ಆಡಿಸಿದಾತ' ಚಿತ್ರದ ಟೀಸರ್ ಅನ್ನು ಗಣೇಶ ಹಬ್ಬಕ್ಕೆ ರಿಲೀಸ್ ಮಾಡಲು ಚಿತ್ರತಂಡ ರೆಡಿಯಾಗಿದೆ. ಇದರ ಜೊತೆಗೆ ಮತ್ತೊಂದು ಸ್ಪೆಷಲ್ ಅಂದ್ರೆ "ಆಡಿಸಿದಾತ" ರಾಘಣ್ಣ ಅಭಿನಯದ 25ನೇ ಚಿತ್ರವಾಗಿದ್ದು. ಈ ಚಿತ್ರವನ್ನು ಲಕ್ಷ್ಮೀ ಎಸ್. ಎ. ಗೋವಿಂದರಾಜು ಹಾಗೂ ನಾಗರಾಜ್ ವಿ ಅವರ ಸಹಕಾರದೊಂದಿಗೆ ದುರ್ಗದ ಹುಲಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಹೆಚ್. ಹಾಲೇಶ್ ನಿರ್ಮಿಸಿದ್ದಾರೆ.
ಫಣೀಶ್ ಭಾರದ್ವಾಜ್ ಕಥೆ, ಚಿತ್ರಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಎರಡು ಹಾಡುಗಳು ಸೇರಿದಂತೆ ಸ್ಪಲ್ಪ ಭಾಗ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಶೀಘ್ರದಲ್ಲೆ ಎರಡನೇ ಹಂತದ ಚಿತ್ರೀಕರಣ ಶುರುವಾಗಲಿದೆ. ಇನ್ನು ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅಭಿನಯಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ ದೊರೆ ಭಗವಾನ್, ಗುರುದತ್, ಬಾಲರಾಜ್, ಸುಶ್ಮಿತ ದಾಮೋದರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.