ನಾಗಮಂಡಲ, ಸೂರ್ಯವಂಶ, ಹಬ್ಬ ಸಿನಿಮಾ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ನಟಿ ವಿಜಯಲಕ್ಷ್ಮಿ ಜೀವನದಲ್ಲಿ ದೊಡ್ಡ ಆಘಾತವೊಂದು ನಡೆದಿದೆ. ವಿಜಯಲಕ್ಷ್ಮಿ ತಾಯಿ ವಿಜಯಾ ಸುಂದರಂ ಇಂದು ಇಹಲೋಕ ತ್ಯಜಿಸಿದ್ದಾರೆ.
ತಾಯಿ ವಿಜಯಾ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಗಾಂಧಿನಗರದ ಸಂತೃಪ್ತಿ ಹೋಟೆಲ್ನಲ್ಲಿ ವಿಜಯಲಕ್ಷ್ಮಿ ಕುಟುಂಬ ವಾಸವಾಗಿತ್ತು. ಇಂದು ಚೆನ್ನೈಗೆ ಹೋಗುವ ಸಿದ್ಧತೆಯಲ್ಲಿದ್ದ ವಿಜಯಲಕ್ಷ್ಮಿಗೆ ತಾಯಿ ಸಾವಿನಿಂದ ದೊಡ್ಡ ಶಾಕ್ ಎದುರಾಗಿದೆ.
ಇನ್ನು, ವಿಜಯಲಕ್ಷ್ಮಿ ಸಹೋದರಿ ಉಷಾ ಅವರಿಗೆ ಅನಾರೋಗ್ಯ ಕಾಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇದರ ನಡುವೆ ಇತ್ತೀಚೆಗೆ ವಿಜಯಲಕ್ಷ್ಮಿಗೆ ಕೋವಿಡ್ ಕೂಡ ಆವರಿಸಿತ್ತು. ಈ ಬಗ್ಗೆ ವಿಡಿಯೋ ಮಾಡಿದ್ದ ಅವರು ಸಾಮಾಜಿಕ ಜಾಲತಾಣದಲ್ಲಿ ಅದನ್ನ ಹಂಚಿಕೊಂಡಿದ್ದರು.
ನಾನು ತುಂಬಾ ನರಳುತ್ತಿದ್ದೇನೆ. ಐದು ದಿನದಿಂದ ಜ್ವರ ಬಂದಿದೆ. ಕಷ್ಟಪಟ್ಟು ಆಸ್ಪತ್ರೆಗೆ ಬಂದಿದ್ದೇನೆ. ನಾನು ಕೋವಿಡ್ ಸೆಂಟರ್ಗೆ ಹೋಗಬೇಕು. ಈ ಬಗ್ಗೆ ಕಲಾವಿದರ ಸಂಘಕ್ಕೆ ಮನವಿ ಮಾಡಿದ್ದೇನೆ. ನಾನು ಎಲ್ಲರ ಜತೆಯೂ ಮಾತನಾಡುತ್ತಾ ಇದ್ದೇನೆ. ಆದರೆ, ಪ್ರಯೋಜನ ಆಗುತ್ತಿಲ್ಲ.
ನನಗೆ ಕೊರೊನಾ ನ್ಯುಮೋನಿಯಾ ಅಟ್ಯಾಕ್ ಆಗಿದೆ. ನಾನು ಉಳಿಯುವ ರೀತಿ ಕಾಣುತ್ತಿಲ್ಲ. ಐದು ದಿನದಿಂದ ಊಟ ಸರಿಯಾಗಿ ಸಿಗುತ್ತಿಲ್ಲ. ನಾನು ಎಲ್ಲಿಯೂ ಹೋಗಿಲ್ಲ. ಕರ್ನಾಟಕದಲ್ಲೇ ಇದ್ದೇನೆ ಎಂದಿದ್ದರು. ಉಷಾ ತುಂಬಾ ವೀಕ್ ಆಗಿದ್ದಾರೆ. ಎರಡು ಮೂರು ದಿನದಿಂದ ನೆನಪು ಮಾಡಿಕೊಳ್ಳಲು ಕಷ್ಟಪಡುತ್ತಿದ್ದಾರೆ.
ಮಾತನಾಡೋಕೆ ಆಗುತ್ತಿಲ್ಲ. ಸರ್ಜರಿ ಆದ ನಂತರ ಇಷ್ಟೆಲ್ಲ ಆಗಿದೆ. ಡಾಕ್ಟರ್ ಜೊತೆ ಮಾತಾಡಿ ನನಗೆ ಸಾಕಾಗಿದೆ. ಯಾರೂ ಕೂಡ ಅವರು ಮಾಡಿರುವ ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ. ಈಗ ಉಷಾ ಅವರಿಗೆ ಬೇರೆ ಕಡೆ ಚಿಕಿತ್ಸೆ ಕೊಡಿಸೋಕೆ ನಮ್ಮ ಬಳಿ ದುಡ್ಡಿಲ್ಲ.
ನಾವೀಗ ಬಹಳ ನೋವಿನಲ್ಲಿ ಇದ್ದೇವೆ. ದಯವಿಟ್ಟು ನಮಗೆ ಆರ್ಥಿಕವಾಗಿ ಸಹಾಯ ಮಾಡಿ ಎಂದು ವಿಜಯಲಕ್ಷ್ಮಿ ಮನವಿ ಮಾಡಿಕೊಂಡಿದ್ದರು. ಇದೆಲ್ಲದರ ನಡುವೆ ಈಗ ವಿಜಯಲಕ್ಷ್ಮಿ ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾರೆ.