ಬೆಂಗಳೂರು: ಮಂಡ್ಯದ ಕಾಂಗ್ರೆಸ್ ಮುಖಂಡರ ಜತೆ ಡಿನ್ನರ್ ಪಾರ್ಟಿ ಬಗ್ಗೆ ನಟಿ,ರಾಜಕಾರಣಿ ಸುಮಲತಾ ಅಂಬರೀಶ್ ಕೊನೆಗೂ ಮೌನ ಮುರಿದಿದ್ದಾರೆ.
ಇಂದು ನಗರದಲ್ಲಿ 'ಡಾಟರ್ ಆಫ್ ಪಾರ್ವತಮ್ಮ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಅದು ರಹಸ್ಯ ಸಭೆಯಲ್ಲ.ಯಾರದೋ ಬರ್ತ್ಡೇ ಪಾರ್ಟಿಯಾಗಿತ್ತು. ನಾನೂ ಹೋಗಿದ್ದೆ. ಅವರೂ ಬಂದಿದ್ದರು. ಅದಕ್ಕೆ ನಾನಾ ಬಣ್ಣ ಕೊಡುವುದು ಸರಿಯಲ್ಲ. ಅದರ ಬಗ್ಗೆ ನಾನು ಹೆಚ್ಚು ಮಾತಾಡೋದಿಲ್ಲ. ನಮ್ಮ ಖಾಸಗಿ ಲೈಫಿನಲ್ಲಿ ಏನೇನು ಮಾಡುತ್ತೇವೋ, ಅದಕ್ಕೆಲ್ಲ ಸ್ಪಷ್ಟನೆ ಕೊಡಬೇಕಾಗಿಲ್ಲ ಎಂಬುದು ನನ್ನ ಅಭಿಪ್ರಾಯ ಎಂದರು.
ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಿದ್ದ ಸುಮಲತಾ ಅವರಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ನ ಕೆಲವರು ಬಹಿರಂಗ ಬೆಂಬಲ ನೀಡಿದ್ದರು. ಮತದಾನ ಮುಗಿದ ನಂತ್ರ ಸುಮಲತಾ ಹಾಗೂ ಕಾಂಗ್ರೆಸ್ನ ಚಲುವರಾಯ ಸ್ವಾಮಿ ಸೇರಿದಂತೆ ಕೆಲವರು ಖಾಸಗಿ ಹೊಟೇಲ್ನಲ್ಲಿ ಔತಣಕೂಟ ನಡೆಸಿದ್ದರು. ಈ ದೃಶ್ಯಗಳು ಮಾಧ್ಯಮಗಳಲ್ಲಿ ವೈರಲ್ ಆಗಿ, ರಾಜ್ಯ ರಾಜಕಾರಣದಲ್ಲಿ ಸಂಚಲನ ಉಂಟುಮಾಡಿತ್ತು. ಈ ಬಗ್ಗೆ ಅಂದೇ ಚೆಲುವರಾಯ ಸ್ವಾಮಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದರು.
ಮಂಡ್ಯದಲ್ಲಿ ನಡೆಯುತ್ತಿರುವ ಮೈತ್ರಿ ಪಕ್ಷಗಳ ನಾಯಕರ ನಡುವಿನ ಜಗಳದ ಬಗ್ಗೆ ಕೇಳಿದ ಪ್ರಶ್ನೆಗೆ, ಆ ಬಗ್ಗೆ ನಾ ಏನೂ ಮಾತಾಡಲ್ಲ ಎಂದರು. ಜೊತೆಗೆ ಮಂಡ್ಯದ ಫಲಿತಾಂಶದ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಚುನಾವಣೋತ್ತರ ವರದಿಗಳನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಸುಮಲತಾ ಹೇಳಿದರು.