ಕನ್ನಡ, ತೆಲುಗು, ತಮಿಳು ಹಾಗು ಮಲಯಾಳಂ ಚಿತ್ರಗಳಲ್ಲಿ ನಟಿಸಿ, ಬಹು ಬೇಡಿಕೆಯ ನಟಿ ಅಂತಾ ಕರೆಯಿಸಿಕೊಂಡಿರುವವರು ಸ್ಯಾಂಡಲ್ವುಡ್ನ ಕೊಡಗಿನ ಬೆಡಗಿ ನಟಿ ಹೀರೋಯಿನ್ ಪ್ರೇಮಾ. 'ಉಪೇಂದ್ರ ಮತ್ತೆ ಹುಟ್ಟಿ ಬಾ' ಸಿನಿಮಾದ ಬಳಿಕ ಬ್ರೇಕ್ ಪಡೆದಿದ್ದ ಚಂದ್ರಮುಖಿ ಪ್ರಾಣಸಖಿ ಚಿತ್ರದ ಪ್ರೇಮಾ ಈಗ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ವೆಡ್ಡಿಂಗ್ ಗಿಫ್ಟ್ ಸಿನಿಮಾದಲ್ಲಿ ಮೊದಲ ಬಾರಿಗೆ ಲಾಯರ್ ಪಾತ್ರ ಮಾಡ್ತಾ ಇರೋ ತನಗೆ ಸಿನಿಮಾಗಳು ಹಾಗು ಸಿನಿಮಾ ಅಂದರೆ ಹೇಗೆ ಇರಬೇಕು ಅನ್ನೋದನ್ನ 'ಈಟಿವಿ ಭಾರತ'ದ ಜೊತೆ ಮಾತನಾಡಿದ್ದಾರೆ.
ವೆಡ್ಡಿಂಗ್ ಗಿಫ್ಟ್ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು.. ಸಿನಿಮಾದಲ್ಲಿ ಪಾತ್ರಕ್ಕೆ ಸ್ಕೋಪ್ ಇದ್ದ ಕಾರಣ ಪ್ರೇಮಾ ಈ ಸಿನಿಮಾವನ್ನ ಒಪ್ಪಿಕೊಂಡ್ರಂತೆ. ಕನ್ನಡದಲ್ಲಿ 2ನೇ ಸಿನಿಮಾಗೇ ಸ್ಟಾರ್ ಪಟ್ಟ ಅಲಂಕರಿಸಿದ ಪ್ರೇಮಾ 'ಓಂ' ಸಿನಿಮಾದ ಬಗ್ಗೆ ಸಾಕಷ್ಟು ವಿಷಯಗಳನ್ನ ಬಿಚ್ಚಿಟ್ಟರು. ನಾನು ಯಾವತ್ತೂ ಸ್ಟಾರ್ ಅಂತಾ ಅಂದುಕೊಂಡಿಲ್ಲ. ಏಕೆಂದರೆ, ಓಂ ಸಿನಿಮಾ ಹಿಟ್ ಆಗೋದಿಕ್ಕೆ ಕಾರಣ ನಿರ್ದೇಶಕರು ಹಾಗು ನಿರ್ಮಾಪಕರು ಎಂದರು.
ವೆಡ್ಡಿಂಗ್ ಗಿಫ್ಟ್ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡ್ತಾ ಇರೋ ಪ್ರೇಮಾ ಅವರನ್ನು ಅಭಿಮಾನಿಗಳು ಚಂದ್ರಮುಖಿ ಪ್ರಾಣಸಖಿ ಪ್ರೇಮಾ ಅಂತಾನೇ ಕರೆಯುತ್ತಾರಂತೆ. ಈ ಸಿನಿಮಾದ ಬಗ್ಗೆ ಪ್ರೇಮಾಗೆ ಹೆಮ್ಮೆ ಇದೆ. ಆ ಸಿನಿಮಾ ಆಗ ಹಿಟ್ ಆಗಿರೋದಕ್ಕೆ ಕಾರಣ ನಿರ್ದೇಶಕ ಕಾರಂತ ಅವರು. ಆ ಚಿತ್ರದ ಕ್ಲೈಮಾಕ್ಸ್ ಅನ್ನು ಪ್ರೇಕ್ಷಕರು ಒಪ್ಪಿಕೊಳ್ಳಲ್ಲ ಅಂದುಕೊಂಡಿದ್ದೆ. ಆದರೂ, ಜನ ಇಷ್ಟಪಟ್ರು ಎಂದು ತಿಳಿಸಿದರು.
ವಿಷ್ಣುವರ್ಧನ್ ಜೊತೆ ಯಜಮಾನ ಸಿನಿಮಾದಲ್ಲಿ ನಟಿಸಿದ್ದ ಬಗ್ಗೆ ಪ್ರೇಮಾ ಕೆಲ ವಿಚಾರಗಳನ್ನ ಬಿಚ್ಚಿಟ್ಟರು. ವಿಷ್ಣುವರ್ಧನ್ ಜೊತೆ ಅಭಿನಯ ಮಾಡಬೇಕಾದ್ರೆ ತುಂಬಾನೇ ಭಯ ಆಗ್ತಿತ್ತಂತೆ. ಇಬ್ಬರು ಡೈರೆಕ್ಟರ್ ಯಜಮಾನ ಚಿತ್ರವನ್ನ ನಿರ್ದೇಶನ ಮಾಡಿದ್ರು ಅಂತಾ ಪ್ರೇಮಾ ಹೇಳಿಕೊಂಡ್ರು.
ನಿರ್ದೇಶಕರ ಕುರಿತು ಪ್ರೇಮಾ ಹೇಳಿದ್ದಿಷ್ಟು.. ಎಲ್ಲಾ ಬಗೆಯ ಪಾತ್ರಗಳನ್ನ ಮಾಡಿರುವ ಪ್ರೇಮಾಗೆ ಶರಪಂಜರ ಕಲ್ಪನ ತರ ಅಭಿನಯ ಮಾಡಬೇಕು ಅಂತಾ ಅನಿಸುತ್ತೆ. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಜೊತೆ ಸಿನಿಮಾ ಮಾಡಬೇಕೆಂದು ತುಂಬಾನೇ ಆಸೆ ಇತ್ತು. ಆದರೆ ಆಗಲಿಲ್ಲ. ಅವತ್ತಿನ ನಿರ್ದೇಶಕರ ತರ ಇವತ್ತಿನ ನಿರ್ದೇಶಕರು ಇಲ್ಲ ಅಂತಾ ತಮ್ಮ ಅಸಮಾಧಾನವನ್ನು ಹೊರಹಾಕಿದ್ರು.
ನನ್ನ ಸಿನಿಮಾಗಳ ಕಥೆಯನ್ನ ನಮ್ಮ ತಾಯಿ ಸೆಲೆಕ್ಟ್ ಮಾಡೋದು. ನಾನು ಯಾವತ್ತು ಕಾಪಿ ಮಾಡೋಲ್ಲ. ನಾನು ಪಾತ್ರಕ್ಕೆ ಫೀಲ್ ಆಗುವ ರೀತಿ ಅಭಿನಯಿಸುತ್ತೇನೆ. ಹೀಗಾಗಿ, ನಮಗೆ ಅಷ್ಟೊಂದು ಸಿನಿಮಾಗಳನ್ನ ಮಾಡೋದಿಕ್ಕೆ ಆಯಿತು ಎಂದರು.
ತಾಯಿನೇ ಬೆಸ್ಟ್ ವಿಮರ್ಶಕಿ.. ನನಗೆ ಬೆಸ್ಟ್ ವಿಮರ್ಶಕರು ಅಂದರೆ ನನ್ನ ತಾಯಿ. ನನ್ನ ಸಿನಿಮಾಗಳಲ್ಲಿ ನನ್ನ ತಾಯಿಗೆ ಇಷ್ಟವಾದ ಸಿನಿಮಾ ಅಂದ್ರೆ ನಮ್ಮೂರ ಮಂದಾರ ಹೂವೆ. ಈ ಸಿನಿಮಾದ ಘಟನೆ ಬಗ್ಗೆ ಹಂಚಿಕೊಂಡರು.
ಪ್ರೇಕ್ಷಕರ ಬಗ್ಗೆ ನಟಿಯ ಅಭಿಪ್ರಾಯ.. ಪ್ರೇಕ್ಷಕರು ದೊಡ್ಡ ಸಿನಿಮಾ, ಚಿಕ್ಕ ಸಿನಿಮಾ ಅಂತಾ ನೋಡಲ್ಲ. ಆ ಕಾಲದಲ್ಲಿ ಕಾದಂಬರಿ ಆಧಾರಿತ ಸಿನಿಮಾಗಳು ಬರ್ತಾ ಇದ್ವು. ಆಗ ಸಿನಿಮಾ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ನೋಡ್ತಾ ಇದ್ದರು. ಈಗ ಆ ರೀತಿಯ ಕಥೆಗಳು ಇಲ್ಲ. ಹೀಗಾಗಿ, ಪ್ರೇಕ್ಷಕರು ಥಿಯೇಟರ್ಗೆ ಬರೋದನ್ನ ಕಡಿಮೆ ಮಾಡಿ, ಓಟಿಟಿಗೆ ಅಂಟಿಕೊಂಡಿದ್ದಾರೆ ಅಂದ್ರು.
ಪವರ್ಸ್ಟಾರ್ ಪುನೀತ್ ರಾಜ್‍ಕುಮಾರ್ ಬಗ್ಗೆ ಮಾತನಾಡಿದ ಪ್ರೇಮಾ, ಓಂ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಪುನೀತ್ ಇರುತ್ತಿದ್ದ ಬಗ್ಗೆ ಕೆಲ ಘಟನೆಗಳನ್ನ ಹೇಳಿದ್ರು. ಅವರು ಪ್ರೇಮಾ ಅಂತಾನೇ ನನ್ನನ್ನ ಕರೆಯುತ್ತಿದ್ದರು. ಆದರೆ, ಅವರು ಇಲ್ಲ ಎಂಬ ಭಾವನೆ ಇಲ್ಲ. ನನ್ನ ಮನಸ್ಸಿನಲ್ಲಿ ಅಪ್ಪು ಉಳಿದಿದ್ದಾರೆ ಅಂತಾ ಸ್ಮರಿಸಿದರು.
ಓದಿ: ಈ ವರ್ಷ ನಮ್ಮ ಮನೆಗೆ ಬಂದ ಮೊದಲ ಅತಿಥಿ ಕೊರೊನಾ: ಬಹುಭಾಷಾ ನಟಿ ಮೀನಾ