ಕನ್ನಡ ಚಿತ್ರರಂಗದ ಖ್ಯಾತ ನಟಿ ಪ್ರೇಮಾ ಅವರ ತಂದೆ ನೆರವಂಡ ಚೆಟ್ಟಿಚ್ಚ(75) ನಿಧನರಾಗಿದ್ದಾರೆ. ಕೆಲ ತಿಂಗಳಿನಿಂದ ಅವರು ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದರು.
ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ನಿನ್ನೆ ಸಂಜೆ ಚೆಟ್ಟಿಚ್ಚ ಮೃತರಾಗಿದ್ದಾರೆ. ಚೆಟ್ಟಿಚ್ಚ ಅವರ ಅಂತ್ಯಕ್ರಿಯೆಯನ್ನು ಇಂದು ಮಧ್ಯಾಹ್ನ ಸ್ವಗ್ರಾಮ ಕೊಡಗಿನ ಮೂರ್ನಾಡು ಸಮೀಪದ ಕುಂಬಳದಾಳುವಿನಲ್ಲಿ ನಡೆಸಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮೃತರು ಪತ್ನಿ, ಚಿತ್ರನಟಿ ಪ್ರೇಮ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ಎನ್‌ಸಿ ಅಯ್ಯಪ್ಪ ಸೇರಿ ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಪ್ರೇಮ ಅವರ ಯಶಸ್ವಿ ವೃತ್ತಿ ಜೀವನದಲ್ಲಿ ತಂದೆಯವರ ಪಾತ್ರ ಬಹಳವಾಗಿತ್ತು. ಪ್ರೇಮ ಅವರಿಗೆ ಹೆಜ್ಜೆ ಹೆಜ್ಜೆಯಲ್ಲೂ ತಂದೆ ಚೆಟ್ಟಿಚ್ಚ ನೆರವಾಗಿದ್ದರು.