ಇಂದು ಮಿನುಗು ತಾರೆ ಕಲ್ಪನಾ ಜನುಮದಿನ. ಅವರು ನಮ್ಮನ್ನಗಲಿ 41 ವರ್ಷಗಳೇ ಕಳೆದಿವೆ. ಕೇವಲ 36 ವರ್ಷದ ವಯಸ್ಸಿನಲ್ಲಿ 78 ಕನ್ನಡ ಹಾಗೂ ಇತರ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿದವರು ಕಲ್ಪನಾ. ಅವರ ವೈವಿಧ್ಯಮಯ ಬದುಕು ದುರಂತವಾಗಿ ಕೊನೆಯಾಯಿತು.
ಕಲ್ಪನಾ ಅವರ ಸಿನಿಮಾಗಳು ಅಂದರೆ ಅಭಿನಯ, ಹಾಡುಗಳು, ಸಂಭಾಷಣೆ, ವಸ್ತ್ರ ವಿನ್ಯಾಸ, ವಿರಹದ ಛಾಯೆ, ಗಟ್ಟಿ ಚಿತ್ರಕಥೆ. ಹೆಣ್ಣಿನ ನೋವು, ಕಷ್ಟ ಕಾರ್ಪಣ್ಯಗಳನ್ನು ಕಲ್ಪನಾ ಅವರ ಪಾತ್ರದ ಮೂಲಕ ನಿರ್ದೇಶಕರುಗಳು ತೆರೆಯ ಮೇಲೆ ತಂದಿದ್ದರು. ಅದರಲ್ಲಿ ದಿವಂಗತ ಎಸ್.ಆರ್.ಪುಟ್ಟಣ್ಣ ಕಣಗಾಲ್ ಪ್ರಮುಖ ನಿರ್ದೇಶಕರು.
1943 ಜುಲೈ 18ರಂದು ಜನಿಸಿದ ಕಲ್ಪನಾ ಮೇ 12, 1979ರಂದು ಈ ಲೋಕದ ಪಯಣವನ್ನು ಮುಗಿಸಿದರು. ಇಂದು ಕಲ್ಪನಾ ಅವರ ಜನುಮದಿನ.
- ಹಿಂದಿ ಸಿನಿಮಾಕ್ಕೆ ಹೇಗೆ ಮೀನಾ ಕುಮಾರಿ ಇದ್ದರೋ ಹಾಗೆ ಕನ್ನಡ ಚಿತ್ರ ರಂಗದಲ್ಲಿ ಕಲ್ಪನಾ ಸಹ ಮಿನುಗಿ ಮಿಂಚಿದವರು.
- ಕಲ್ಪನಾ ಅವರು ಬಹಳ ಬೇಗ ಸಿನಿಮಾ ರಂಗದಲ್ಲಿ ಶೈನ್ ಆಗಲು ಕಾರಣ ಅವರ ಆಸ್ಥೆ, ವಿದ್ಯೆ ಹಾಗೂ ನಿರ್ದಿಷ್ಟ ನಿಲುವುಗಳು.
- ಕಲ್ಪನಾ ಅವರು ಬಾಲಕಿ ಆಗಿದ್ದಾಗ ನೃತ್ಯದಲ್ಲಿ ಬಹುಮಾನಗಳನ್ನು ಗೆಲ್ಲುತ್ತಾ ಇದ್ದವರು. ಅವರಿಗೆ ಬಹಳವಾಗಿ ಸ್ಪೂರ್ತಿ ನೀಡಿದ್ದು ಬಿ ಆರ್ ಪಂತುಲು ಅವರ ‘ಕಿತ್ತೂರು ರಾಣಿ ಚೆನ್ನಮ್ಮ’ ಸಿನಿಮಾ. ಇವರು ಶಿವಕುಮಾರ್, ಶ್ರೀಕಂಠಪ್ಪ, ಬಳ್ಳಾರಿ ಲಲಿತ, ನರಸಿಂಹರಾಜು ಅವರ ಜೊತೆ ನಾಟಕಗಳಲ್ಲಿಯೂ ಅಭಿನಯಿಸಿದ್ದರು.
- ಶಿವಕುಮಾರ್ ಅವರ ಸಹಾಯದಿಂದ ಮದರಾಸ್ ತಲುಪಿದ ಕಲ್ಪನಾ ಅಲ್ಲಿ ನರಸಿಂಹರಾಜು ಅವರ ಸಹಾಯದಿಂದ ಬಿ ಆರ್ ಪಂತುಲು ಅವರ ‘ಸಾಕು ಮಗಳು’ ಚಿತ್ರಕ್ಕೆ 1963ರಲ್ಲಿ ಆಯ್ಕೆ ಆಗುತ್ತಾರೆ. ಇವರ ಮೊದಲ ಸಿನಿಮಾದಲ್ಲಿ ಇವರ ಸಂಭಾಷಣೆ ಶೈಲಿ ಒಪ್ಪದ ಬಿ ಆರ್ ಪಂತುಲು ಅವರು ಮತ್ತೊಬ್ಬರಿಂದ ಕಲ್ಪನಾ ಪಾತ್ರಕ್ಕೆ ಡಬ್ ಮಾಡಿಸಿದ್ದರು. ಇವರು ಅದನ್ನು ಚ್ಯಾಲೆಂಜ್ ಆಗಿ ಸ್ವೀಕರಿಸಿ ಮುಂದೆ ಸಾಗುತ್ತಾರೆ.
- ಆಗಿನ ಕಾಲಕ್ಕೆ ಬಿ.ಆರ್.ಪಂತುಲು ಅವರ ಸಂಸ್ಥೆ ಜೊತೆ ಕಲ್ಪನ ತಿಂಗಳಿಗೆ 500 ರೂಪಾಯಿ ಸಂಬಳದಂತೆ ಮೂರು ವರ್ಷದ ಕಾಂಟ್ರ್ಯಾಕ್ಟ್ ಸಹಿ ಹಾಕುತ್ತಾರೆ. ಪಂತುಲು ಅವರ ‘ಸ್ಕೂಲ್ ಮಾಸ್ಟರ್’ ಮಲಯಾಳಂ ಭಾಷೆಯಲ್ಲಿ ರಿಮೇಕ್ ಮಾಡಿದಾಗ ಕಲ್ಪನಾ ಅವರನ್ನು ಪುಟ್ಟಣ್ಣ ಕಣಗಾಲ್ ಮೊದಲು ನಿರ್ದೇಶನ ಮಾಡಿದರು.
- ಬಿ ಸರೋಜಾ ದೇವಿ ಆಯ್ಕೆ ಆಗಬೇಕಿದ್ದ ‘ಸರ್ವಮಂಗಳ’ ಚಿತ್ರಕ್ಕೆ ಕಲ್ಪನಾ ಆಯ್ಕೆ ಆಗುತ್ತಾರೆ. ಆಮೇಲೆ ಅವರ ಪಾತ್ರಕ್ಕೆ ಬಿ ಸರೋಜಾ ದೇವಿ ಅವರು ಭೇಷ್ ಅನ್ನುತ್ತಾರೆ.
- ಕಲ್ಪನಾ ಅವರು ಜೀವನದಲ್ಲಿ 78 ಸಿನಿಮಾಗಳು ಅಭಿನಯಿಸಿದ್ದರು. ಅವಿಸ್ಮರಣೀಯವಾದ ಸಿನಿಮಾಗಳು ಅಂದರೆ ನಾಂದಿ, ಬೆಳ್ಳಿ ಮೋಡ, ಬಂಗಾರದ ಹೂವು, ಹಣ್ಣೆಲೆ ಚಿಗುರಿದಾಗ, ಉಯ್ಯಾಲೆ, ನಮ್ಮ ಮಕ್ಕಳು, ಕಪ್ಪು ಬಿಳುಪು, ಸೀತಾ, ಗೆಜ್ಜೆ ಪೂಜೆ, ಸೋತು ಗೆದ್ದವಳು, ಶರಪಂಜರ, ಮುಕ್ತಿ, ನಾರಿ ಮುನಿದರೆ ಮಾರಿ, ನಾ ಮೆಚ್ಚಿದ ಹುಡುಗ, ಕೆಸರಿನ ಕಮಲ, ಗಂಧದ ಗುಡಿ, ಎರಡು ಕನಸು, ದಾರಿ ತಪ್ಪಿದ ಮಗ, ಬೆಳುವಲದ ಮಡಿಲಲ್ಲಿ, ವಿಜಯ ವಾಣಿ, ಬಯಲು ದಾರಿ ಚಿತ್ರಗಳು ಹೆಚ್ಚು ಪ್ರಶಂಸೆ ಪಡೆದವು.
- ಕಲ್ಪನಾ ಅವರನ್ನು ವೃತ್ತಿ ಬದುಕಿನಲ್ಲಿ ಬಹಳವಾಗಿ ಕಾಡಿದ್ದು ಅವರ ‘ಇಗೋ’ (ಅಹಂ). ನನ್ನಿಂದಲೇ ಸಿನಿಮಾ ಯಶಸ್ಸು ಎಂಬುದು ಅವರ ಮನಸ್ಸಿಗೆ ಮೆತ್ತಿಕೊಂಡಿತ್ತು. ಈ ಸಮಸ್ಯೆ ಅವರನ್ನು ತಾರಕಕ್ಕೆ ಕರೆದುಕೊಂಡು ಹೋಯಿತು. ಪುಟ್ಟಣ್ಣ ಕಣಗಾಲ್ ಅವರೇ ಒಂದು ಕಾಲಕ್ಕೆ ಕಲ್ಪನಾ ಬದಲಿಗೆ ನಟಿ ಆರತಿ ಅವರನ್ನು ಪ್ರೋತ್ಸಾಹಿಸುತ್ತಾ ಬಂದರು.
- ಕಲ್ಪನಾ ಹಾಗೂ ಪುಟ್ಟಣ್ಣ ಕಣಗಾಲ್ ಅವರು ಮುನಿಸಿಕೊಂಡಿದ್ದ ಅನೇಕ ಉದಾಹರಣೆಗಳು ಇವೆ. ಆಮೇಲೆ ತಮ್ಮ ತಪ್ಪುಗಳನ್ನು ಅರಿತು ಸರಿ ಹೋಗಿದ್ದನ್ನು ಕಂಡವರು ಇದ್ದಾರೆ.
- ‘ಒನಕೆ ಓಬವ್ವ’ ಪಾತ್ರಕ್ಕೆ ಪುಟ್ಟಣ್ಣ ಕಣಗಾಲ್ ಮೊದಲು ಆಯ್ಕೆ ಮಾಡಿದ್ದೆ ಕಲ್ಪನಾ ಅವರನ್ನು. ಅದು ಚಿಕ್ಕ ಪಾತ್ರವಾಯಿತು ಎಂದು ಕಲ್ಪನಾ ತಿರಸ್ಕಾರ ಮಾಡಿದ್ದರು. ಹಾಗಾಗಿ ಜಯಂತಿ ಅವರಿಗೆ ಆ ಪಾತ್ರ ದಕ್ಕಿತು ಮತ್ತು ಯಶಸ್ಸು ಸಹ ಕಂಡಿತು.
- ಕಲ್ಪನಾ ಅವರ ಅಭಿನಯ ಶಕ್ತಿ ಗಮನಿಸಿ ಜ್ಞಾನಪೀಠ ಪ್ರಶಸ್ತಿ ವಿಜೇತ ಶಿವರಾಮ ಕಾರಂತರು ತಮ್ಮದೇ ಕುಡಿಯರ ಕೂಸು ಕಾದಂಬರಿಯನ್ನು ಕಥಾವಸ್ತುವಾಗಿ ಇರಿಸಿ ಮಲೆಯ ಮಕ್ಕಳು ಎಂಬ ಸಿನಿಮಾ ನಿರ್ದೇಶಿಸಿದ್ದರು. ಆದರೆ ಈ ಸಿನಿಮಾ ಯಶಸ್ಸು ಕಾಣಲಿಲ್ಲ.
- ರಷ್ಯಾದಲ್ಲಿ ಭಾಷಣ ಮಾಡಿ ಬಂದ ಕನ್ನಡ ಚಿತ್ರ ರಂಗದ ಏಕೈಕ ನಟಿ ಕಲ್ಪನಾ. ಅವರ ಎರಡು ಸಿನಿಮಗಳು ‘ಉಯ್ಯಾಲೆ’ ಹಾಗೂ ‘ಗೆಜ್ಜೆ ಪೂಜೆ’ ರಷ್ಯಾ ದೇಶದ ಪ್ರಿಟ್ಜಾನ್ ಚಿತ್ರಮಂದಿರದಲ್ಲಿ ಪ್ರದರ್ಶನ ಆಗಿತ್ತು. ಅಲ್ಲಿ ಸುಮಾರು 900 ಜನ ಕಲ್ಪನಾ ಅವರ ಸಿನಿಮಾವನ್ನು ವೀಕ್ಷಿಸಿ ಎದ್ದು ನಿಂತು ಚಪ್ಪಾಳೆ ತಟ್ಟುತ್ತಾರೆ, ಕೆಲವರು ಕಣ್ಣೀರು ಹಾಕಿದ್ದೂ ಇದೆ. ಸಿನಿಮಾ ನಂತರ ಚರ್ಚೆ ಕೂಡಾ ನಡೆದಿತ್ತು.
- ಈ ರಷ್ಯಾ ಕಾರ್ಯಕ್ರಮವನ್ನು ನಿರೂಪಣೆ ಮಾಡಿದವರು ಎ ವಿ ಕೃಷ್ಣಸ್ವಾಮಿ. ಆ ಸಮಾರಂಭದಲ್ಲಿ ಕಲ್ಪನಾ ಆಂಗ್ಲ ಭಾಷೆಯಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡುತ್ತಾರೆ. ಪುಟ್ಟಣ್ಣ ಕಣಗಾಲ್ ಅವರನ್ನು ಉದ್ದೇಶಿಸಿ ಕೆಲವು ಮಾತುಗಳನ್ನು ಹೇಳುತ್ತಾರೆ. ಕಲ್ಪನಾ ಜೀವನದಲ್ಲಿ ವಿದ್ಯಾಭ್ಯಾಸ ಸರಿಯಾಗಿ ಆಗಿದ್ದು ಅವರಿಗೆ ಅನುಕೂಲ ಆಗುತ್ತದೆ. ಕಲ್ಪನಾ ಕಾದಂಬರಿಗಳನ್ನು, ಇಂಗ್ಲೀಷ್ ಪತ್ರಿಕೆಗಳನ್ನು ಓದುವ ಹವ್ಯಾಸ ಸಹ ಇಟ್ಟುಕೊಂಡಿದ್ದರು.
- ಕಲ್ಪನಾ ಅವರ ಹವ್ಯಾಸಗಳಲ್ಲಿ ಅತ್ಯುತ್ತಮ ಉಡುಗೆ ಹಾಗೂ ತೋಟಗಾರಿಕೆ ಸಹ ಸೇರಿತ್ತು. ಅವರು ಬಣ್ಣಗಳನ್ನು ಅವರಿಗೆ ಒಪ್ಪುವಂತೆ ಎಷ್ಟು ಚೆನ್ನಾಗಿ ಉಡುಗೆ ಧರಿಸುತ್ತಿದ್ದರೆಂದರೆ, ನಿರ್ದೇಶಕರು ಕೂಡಾ ಸಿನೆಮಾದ ಉಡುಗೆಯ ಜವಾಬ್ದಾರಿ ಅವರಿಗೆ ಕೊಡುತ್ತಿದ್ದರು.
- ಕಲ್ಪನಾ ಅವರ ಸಹೋದರ ದಿವಾಕರರನ್ನು ಸಿನಿಮಾಕ್ಕೆ ಪರಿಚಯ ಮಾಡಲು ಡಾ. ಶಿವರಾಮ ಕಾರಂತರ ಕಾದಂಬರಿಯನ್ನು ಆಯ್ಕೆ ಸಹ ಮಾಡಿಕೊಳ್ಳುತ್ತಾರೆ. ಆದರೆ ಸಹೋದರನನ್ನು ದೊಡ್ಡ ನಟನನ್ನಾಗಿ ನೋಡಬೇಕು ಎಂಬ ಆಸೆ ಫಲಿಸಲಿಲ್ಲ.
- ‘ಶರಪಂಜರ’ ಕಲ್ಪನಾ ಅವರ ಜೀವನಕ್ಕೂ ಬಹಳ ಹತ್ತಿರ ಆದ ಸಿನಿಮಾ. ಅವರು ಹುಚ್ಚಿ ಪಾತ್ರ ಮಾಡುವಾಗ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿತ್ತು. ಆ ಪಾತ್ರ ನಿಭಾಯಿಸಿದ ಮೇಲೆ ಅವರು ಕುಸಿದು ಬಿದ್ದದ್ದೂ ಇದೆ. ಒಂದು ದಿನ ಅವರು ಯಾರನ್ನೂ ಮಾತನಾಡಿಸಲೂ ಇಲ್ಲ. ಕಾರಣ ಅವರು ಆ ಪಾತ್ರದಲ್ಲಿ ಅಷ್ಟೊಂದು ಆಳವಾಗಿ ಇಳಿದಿದ್ದರು.
- ‘ಶರಪಂಜರ’ ಸಿನಿಮಾದ ಮೊದಲ ಪ್ರದರ್ಶನ ಏರ್ಪಾಡು ಮಾಡಿದ್ದು ಮದ್ರಾಸಿನಲ್ಲಿ. ಅಂದು ಹಿಂದಿ ಸಿನಿಮಾ ನಟಿ ಶರ್ಮಿಳಾ ಠಾಗೋರ್ ಸಿನಿಮಾವನ್ನು ವೀಕ್ಷಿಸಿ ‘ನನಗೆ ಈ ಪಾತ್ರ ಸಿಕ್ಕಿದ್ದರೆ, ಕಲ್ಪನಾ ಅವರಷ್ಟು ನ್ಯಾಯ ಒದಗಿಸಲು ಸಾಧ್ಯ ಆಗುತ್ತಾ ಇರಲಿಲ್ಲ’ ಎಂದಿದ್ದರು.
- ಕಲ್ಪನಾ ಉಡುತ್ತಾ ಇದ್ದ ಷಿಫಾನ್, ಸಿಲ್ಕ್ ಸೀರೆಗಳು, ಕಿವಿಗೆ ಹಾಕುತ್ತಿದ್ದ ಓಲೆಗಳು, ಮೂಗುಬೊಟ್ಟು, ಫ್ರಿಲ್ಲ್ ಬ್ಲೌಸ್, ಎಡಗೈಯಲ್ಲಿ ಅವರು ತೊಡುತ್ತಿದ್ದ ರಿಂಗ್....ಹೀಗೆ ಅವರ ಅನೇಕ ಸ್ಟೈಲ್ ಇಂದಿಗೂ ಅವರ ಸಿನಿಮಾ ಮೂಲಕ ಜ್ಞಾಪಕ ಮಾಡುತ್ತದೆ.
- ಕಲ್ಪನಾ ಅವರ ಪತಿ ಗುಡಿಗೇರಿ ಬಸವರಾಜ್. ಸಿನಿಮಾದಿಂದ ನಾಟಕಕ್ಕೆ ಅವರು ಹೆಚ್ಚು ಒತ್ತು ಕೊಡಲು ಗುಡಿಗೆರೆ ಬಸವರಾಜ್ ಕೂಡಾ ಕಾರಣ. ಅವರೂ ಸಹ ಪ್ರಖ್ಯಾತ ರಂಗಭೂಮಿ ನಟ.
- ಕಲ್ಪನಾ ಅವರು ಬೆಳಗಾವಿಯ ಟ್ರಾವೆಲರ್ ಬಂಗಲೆ ಒಂದರಲ್ಲಿ ಮೇ 12, 1979 ರಂದು ಚಿರ ನಿದ್ರೆಗೆ ಜಾರಿದರು.
- ಕಲ್ಪನಾ ಅವರನ್ನು ಅನುಕರಣೆ ಮಾಡಿದವರು ಅನೇಕರಿದ್ದಾರೆ. ಪೂಜಾ ಗಾಂಧಿ ‘ಅಭಿನೇತ್ರಿ’ ಸಿನಿಮಾವನ್ನು ಕಲ್ಪನಾ ಅವರನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಮಾಡಿದ್ದು.
- ಪತ್ರಕರ್ತ ರವಿ ಬೆಳೆಗೆರೆ ಅವರು ‘ಕಲ್ಪನಾ ವಿಲಾಸ’ ಪುಸ್ತಕ ಬರೆದಿದ್ದಾರೆ. ‘ಕಲ್ಪನ’ ಅವರ ಬಗ್ಗೆ ಅನೇಕರು ಲೇಖನಗಳನ್ನು, ಕಿರು ಪುಸ್ತಕಗಳನ್ನು ಹೊರ ತಂದಿದ್ದಾರೆ.