ಕೊರೊನಾದಿಂದಾಗಿ ಇಡೀ ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಬಂದ್ ಆಗಿದೆ. ಪರಿಣಾಮ ಇದನ್ನೇ ನಂಬಿಕೊಂಡಿದ್ದ ಸಾವಿರಾರು ಜನರು ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡಬೇಕಾಗಿದೆ. ಇಂತಹ ಸಮಯದಲ್ಲಿ ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ತಾರೆಯರು ಹಸಿದವರ ಹೊಟ್ಟೆಯನ್ನ ತುಂಬಿಸುತ್ತಿದ್ದಾರೆ.
ಇದೀಗ ಸ್ಯಾಂಡಲ್ವುಡ್ನ ಡೈಲಾಗ್ ಕಿಂಗ್, ಅಗ್ನಿ ಐಪಿಎಸ್ ಖ್ಯಾತಿಯ ನಾಯಕ ನಟ ಸಾಯಿಕುಮಾರ್ ಸಹೋದರರು ಸಹ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಮಿಡಿದಿದ್ದಾರೆ. ಸಾಯಿಕುಮಾರ್ ಸಹೋದರರು ಸ್ಯಾಂಡಲ್ವುಡ್ನ ಕಾರ್ಮಿಕರ ನೆರವಿಗೆ ಧಾವಿಸಿ ಮಾನವೀಯತೆ ಮೆರೆದಿದ್ದಾರೆ.
ನಟರಾದ ಸಾಯಿಕುಮಾರ್, ರವಿಶಂಕರ್ ಹಾಗೂ ನಿರ್ದೇಶಕ ಅಯ್ಯಪ್ಪ ಪಿ ಶರ್ಮ ಮೂವರು ಸಹೋದರರು ಸೇರಿ ಸುಮಾರು ಐದು ಲಕ್ಷದ ನಾಲ್ಕು ರೂಪಾಯಿಯನ್ನು ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ ನೀಡಿದ್ದಾರೆ.
ನಾವು ಬೇರೆ ರಾಜ್ಯದಲ್ಲಿ ಜನಿಸಿದ್ದರೂ, ನಮ್ಮ ಜನಪ್ರಿಯತೆಯ ಹೆಚ್ಚು ಪಾಲು ಕರ್ನಾಟಕದ್ದು. ಹಾಗಾಗಿ ನಾವು ನಮ್ಮ ಕೈಲಾದ ಸಹಾಯ ಮಾಡಿದ್ದೇವೆ ಎಂದು ಸಾಯಿಕುಮಾರ್ ಸಹೋದರರು ತಿಳಿಸಿದ್ದಾರೆ.