ಮದುವೆ ಸಮಾರಂಭಗಳಲ್ಲಿ ತಮ್ಮ ಪ್ರೀತಿ ಪಾತ್ರರು ಏನೆಲ್ಲಾ ಉಡುಗೊರೆ ಕೊಡಬಹುದು ಅನ್ನೋ ಕುತೂಹಲ ಎಲ್ರಿಗೂ ಇರುತ್ತೆ. ಆದ್ರೆ ನಟ ರಿಷಿ ನನ್ನ ಮದುವೆಗೆ ಯಾರೂ ಗಿಫ್ಟ್ ಕೊಡೋದು ಬೇಡ. ಬದ್ಲಾಗಿ ಉತ್ಕರ್ಷ ಫೌಂಡೇಷನ್ಗೆ ಸಹಾಯ ಮಾಡಿ ಎಂದು ಅಭಿಮಾನಿಗಳು, ಬಂಧು ಬಳಗವನ್ನು ಕೋರಿಕೊಂಡಿದ್ದಾರೆ.
ಕನ್ನಡದ 'ಆಪರೇಷನ್ ಅಲಮೇಲಮ್ಮ', ಕವಲುದಾರಿ, ಶ್ರೀ ಭರತ ಬಾಹುಬಲಿ ಸಿನಿಮಾದಲ್ಲಿ ನಟಿಸಿರುವ ನಟ ರಿಷಿ ಹಸೆಮಣೆ ಏರಲು ಸಿದ್ದರಾಗಿದ್ದಾರೆ. ಬರಹಗಾರ್ತಿಯಾದ ಸ್ವಾತಿಯನ್ನು ವರಿಸಿಕೊಳ್ಳುತ್ತಿರುವ ಇವರ ಮದುವೆಯ ಆಮಂತ್ರಣ ಪತ್ರಿಕೆ ಕೂಡ ಸಿದ್ದಗೊಂಡಿದೆ. ಈ ಆಮಂತ್ರಣ ಪತ್ರಿಕೆಯಲ್ಲಿ 'ನೀವು ನನಗೆ ಮದುವೆ ಗಿಫ್ಟ್ ಕೊಡಬೇಕೆಂದಿದ್ದರೆ ಅದನ್ನು ಉತ್ಕರ್ಷ ಫೌಂಡೇಷನ್ಗೆ ಕೊಡಿ ಎಂದು ಮುದ್ರಿಸಿದ್ದಾರೆ.

ರಿಷಿ ತಮ್ಮ ನಿಶ್ಚಿತಾರ್ಥವನ್ನು ಹೈದ್ರಾಬಾದ್ನಲ್ಲಿ ಮಾಡಿಕೊಂಡಿದ್ದು, ನವೆಂಬರ್ 10ರಂದು ಚೆನ್ನೈನಲ್ಲಿ ಕಂಕಣ ಕಟ್ಟಲಿದ್ದಾರೆ. ನಂತರ ಆರತಕ್ಷತೆ ಬೆಂಗಳೂರಿನ ಮೂನ್ಗೆಟ್ ಬಳಿ ನೆರವೇರಲಿದೆ.

ನಟನಾಗಿ ನನಗೆ ವಿವಿಧ ಪಾತ್ರಗಳನ್ನು ಒಪ್ಪಿಕೊಳ್ಳುವುದು ಇಷ್ಟ. ನನ್ನ ಮಡದಿ ಆಗುವವಳು ಬರಹಗಾರ್ತಿ ಎಂದಿರುವ ರಿಷಿ, ಸದ್ಯ ಸಕಲಕಲಾ ವಲ್ಲಭ, ಸಾರ್ವಜನಿಕರಿಗಾಗಿ ಸುವರ್ಣಾವಕಾಶ, ರಾಮನ ಅವತಾರ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.