ಕನ್ನಡ ಚಿತ್ರರಂಗದ ಕನಸುಗಾರ ವಿ.ರವಿಚಂದ್ರನ್ ಅವರ ಮಗಳು ಗೀತಾಂಜಲಿ ಮದುವೆ ಸಿದ್ಧತೆಗಳು ಭರದಿಂದ ನಡೀತಿದೆ.ಇದೇ 28 ಹಾಗೂ 29, ಎರಡು ದಿನಗಳ ಕಾಲ ರವಿಮಾಮನ ಮಗಳ ಅದ್ಧೂರಿ ಕಲ್ಯಾಣಕ್ಕೆ ಚಂದನವನ ಸಜ್ಜಾಗಿದೆ.
ಬಹುವರ್ಷಗಳ ನಂತ್ರ ಪ್ರೇಮಲೋಕದ ದೊರೆಯ ಮನೆಯಲ್ಲಿ ಮದುವೆ ಕಾರ್ಯವೊಂದು ನಡೆಯುತ್ತಿದೆ. ವಾಲಗ, ಗಟ್ಟಿಮೇಳದ ಸದ್ದುಗಳ ಕ್ರೇಜಿ ಸ್ಟಾರ್ ಮನೆ ಸಾಕ್ಷಿಯಾಗುತ್ತಿದೆ. ಹೇಳಿ, ಕೇಳಿ ರವಿ ಮಾಮಾನ ಮಗಳ ಮದ್ವೆ ಅಂದ್ರೆ ಕೇಳ್ಬೇಕಾ? ಲಕ್ಷಾಂತರ ಅಭಿಮಾನಿಗಳು, ಗಣ್ಯರು ಈ ವಿವಾಹಕ್ಕೆ ಆಗಮಿಸಿ, ನವಜೋಡಿಗೆ ಆಶೀರ್ವದಿಸಲಿದ್ದಾರೆ. ಹೀಗಾಗಿ ರವಿಚಂದ್ರನ್ ಮಗಳ ಮದುವೆಗೆ ಎಲ್ಲಾ ರೀತಿಯಲ್ಲೂ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಮತ್ತೊಂದು ವಿಚಾರ ಏನಂದ್ರೆ, ಮದುವೆಗೆ ಆಗಮಿಸುವ ಗಣ್ಯರಿಗೆ, ಅಭಿಮಾನಿಗಳಿಗೆ ಕಿವಿ ಮಾತೊಂದನ್ನು ಹೇಳಿದ್ದಾರೆ ರವಿಚಂದ್ರನ್. ನೀವೆಲ್ಲರೂ ಪ್ರೀತಿಯಿಂದ ಶುಭ ಹಾರೈಸಲು ಹೂವು ಬೊಕ್ಕೆ ತರ್ತೀರಿ. ಆದರೆ, ಇವು ಸುಮ್ಮನೆ ಬಾಡಿ ಹೋಗಿ ವೇಸ್ಟ್ ಆಗುತ್ತವೆ. ಅದರ ಬದಲು ಹಣದ ವೋಚರ್ಗಳನ್ನ ನೀಡಿದ್ರೆ, ಅವುಗಳನ್ನು ಅನಾಥಾಶ್ರಮಗಳಿಗೆ ಕೊಡಬಹುದು ಎಂದು ತಮ್ಮ ಸದುದ್ದೇಶವನ್ನೂ ಹೊರಹಾಕಿದ್ರು.
ಯಾರ್ ಯಾರಿಗೆ ತಲುಪಿದೆ ಮ್ಯಾರೇಜ್ ಕಾರ್ಡ್ ?
ಇಂದು ಮಾಧ್ಯಮಗಳ ಎದುರು ಹಾಜರಾದ ಹಿರಿಯ ನಟ ರವಿಚಂದ್ರನ್ ಮದುವೆ ತಯಾರಿ ಬಗ್ಗೆ ಮಾಹಿತಿ ಹಂಚಿಕೊಂಡ್ರು. ಬಾಲಿವುಡ್ ನಟ ಅಮಿತಾಬ್ ಬಚ್ಚನ್, ಮೆಗಾ ಸ್ಟಾರ್ ಚಿರಂಜೀವಿ ಸೇರಿದಂತೆ ಪರಭಾಷೆಯ ಕೆಲ ಗಣ್ಯರಿಗೆ ಆಹ್ವಾನ ನೀಡಿದ್ದೇನೆ. ಕನ್ನಡ ಚಿತ್ರರಂಗದ ಎಲ್ಲರಿಗೂ ಮದುವೆಯ ಕರೆಯೋಲೆ ತಲುಪಿಸಿದ್ದೇನೆ ಎನ್ನುವ ಅವರು ಒಟ್ಟು 2000 ಲಗ್ನಪತ್ರಿಕೆಗಳನ್ನು ಹಂಚಿದ್ದಾರಂತೆ.
ಹಾಗೇ ನಾನು ಮತ್ತು ನಮ್ಮ ಈಶ್ವರಿ ಪ್ರೊಡಕ್ಷನ್ ಬೆಳವಣಿಗೆಗೆ ಮಾಧ್ಯಮದವರು ಕಾರಣ. ನನ್ನ ಮಗಳ ಮದುವೆಗೆ ನೀವುಗಳೆಲ್ಲ ಸ್ನೇಹಿತರಾಗಿ, ಸಂಬಂಧಿಕರು ಬನ್ನಿ ಅಂತಾ ಮಾಧ್ಯಮದವರಿಗೂ ಆಹ್ವಾನ ನೀಡಿದ್ರು. ಈ ವೇಳೆ ರವಿಚಂದ್ರನ್ ತಾಯಿ ಕೂಡ ಹಾಜರಿದ್ದರು.