ಧನ್ಯಾ ರಾಮ್ ಕುಮಾರ್ ನಟಿಸಿದ ಮೊದಲ ಸಿನಿಮಾ ‘ನಿನ್ನ ಸನಿಹಕೆ’ ಇಂದು ಬಿಡುಗಡೆ ಆಗಿದೆ. ನಟ ರಾಮ್ ಕುಮಾರ್ ಪುತ್ರಿ ಧನ್ಯಾ ಅವರ ಚೊಚ್ಚಲ ಸಿನಿಮಾದ ಸ್ಪೆಷಲ್ ಶೋ ನೋಡಿ ಮಗಳ ನಟನೆಯ ಬಗ್ಗೆ ಹಾಗು ಸಿನಿಮಾ ಬಗ್ಗೆ ರಾಮ್ ಕುಮಾರ್ ಹರ್ಷ ವ್ಯಕ್ತಪಡಿಸಿದರು.
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳನ್ನು ಮಾಡಿ ಚಾಕ್ಲೇಟ್ ಹೀರೋ ಎಂದೇ ಫೇಮಸ್ ಆದ ನಟ ರಾಮ್ ಕುಮಾರ್. ಡಾ.ರಾಜ್ ಕುಮಾರ್ ಮಗಳು ಪೂರ್ಣಿಮಾ ಅವ್ರನ್ನು ಮದುವೆಯಾಗಿ ಅಣ್ಣಾವ್ರ ಅಳಿಯನಾಗಿರೋ ಇವರು ಚಿತ್ರರಂಗದಿಂದ ದೂರ ಸರಿದು ಬಹಳ ವರ್ಷಗಳೇ ಕಳೆದಿವೆ. ಆದರೆ ರಾಮ್ ಕುಮಾರ್ ಮುದ್ದಿನ ಮಗಳು ಧನ್ಯಾ ನಿನ್ನ ಸನಿಹಕೆ ಸಿನಿಮಾದಿಂದ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.
ಈ ಸಿನಿಮಾ ಚಿತ್ರೀಕರಣ ಆರಂಭವಾದಾಗಿನಿಂದಲೂ ರಾಮ್ ಕುಮಾರ್, ಮಗಳ ಸಿನಿಮಾ ಮುಹೂರ್ತ, ಪ್ರೆಸ್ ಮೀಟ್ಗಳಲ್ಲಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆಗ ಕನ್ನಡ ಚಿತ್ರರಂಗದಲ್ಲಿ, ರಾಮ್ ಕುಮಾರ್ಗೆ ಮಗಳು ಧನ್ಯಾ ಸಿನಿಮಾ ಇಂಡಸ್ಟ್ರಿಗೆ ಬರೋದು ಅಷ್ಟೊಂದು ಇಷ್ಟ ಇಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು.
ಈ ಬೆಳವಣಿಗೆ ನಡೆದ ಕೆಲ ದಿನಗಳ ಬಳಿಕ ರಾಮ್ ಕುಮಾರ್ ಮಗಳು ನಟಿಸ್ತಿರೋ ಸಿನಿಮಾ ಶೂಟಿಂಗ್ ಸ್ಪಾಟ್ಗೆ ಭೇಟಿ ನೀಡಿ, ಸಿನಿಮಾ ಎಂಟ್ರಿಗೆ ನನ್ನ ಸಪೋರ್ಟ್ ಇದೆ ಎಂಬ ಮೆಸೇಜ್ ನೀಡಿದ್ದರು. ಇದೀಗ ನಿನ್ನ ಸನಿಹಕೆ ಸಿನಿಮಾ ಸ್ಪೆಷಲ್ ಶೋಗೆ ಪತ್ನಿ ಪೂರ್ಣಿಮಾ ಜೊತೆ ಬಂದಿದ್ದ ಅವರು ಮಗಳ ಸಿನಿಮಾ ನೋಡಿ ಭಾವುಕರಾದರು. ಇಷ್ಟು ಚಿಕ್ಕ ವಯಸ್ಸಿಗೆ ಸೂರಜ್ ಗೌಡ ಇಂತಹ ಸಿನಿಮಾ ಮಾಡಿದ್ದಾರೆ. ಅವ್ರಿಗೆ ಒಳ್ಳೆ ಭವಿಷ್ಯ ಇದೆ ಎಂದರು.
ಮಗಳ ನಟನೆಯ ಬಗ್ಗೆ ಮಾತನಾಡುತ್ತಾ, ಸಿನಿಮಾ ನೋಡಬೇಕಾದ್ರೆ ಮಗಳು ನನ್ನನ್ನು ತುಂಬಾ ಅಳಿಸಿದ್ದಾಳೆ. ಅಷ್ಟೇ ಅಲ್ಲ, ಎಷ್ಟು ಚೆನ್ನಾಗಿ ಆ್ಯಕ್ಟಿಂಗ್ ಮಾಡಿದ್ದಾಳೆ ಅಂತ ನಾನು ಶಿವಣ್ಣನ ಹತ್ತಿರ ಹೇಳ್ತಿದ್ದೆ ಎಂದು ರಾಮ್ ಕುಮಾರ್ ಭಾವುಕರಾದರು. ಮಗಳು ಇವತ್ತು ಹೀರೋಯಿನ್ ಆಗಿದ್ದಾಳೆ ಅಂದ್ರೆ ಅದಕ್ಕೆ ಅವ್ರ ಅಮ್ಮ ಕಾರಣ ಎಮೋಷನಲ್ ಆದರು.
ಇದನ್ನೂ ಓದಿ: ಚಿತ್ರಮಂದಿರದಲ್ಲಿ ವಿದ್ಯುತ್ ಸಮಸ್ಯೆ: 'ನಿನ್ನ ಸನಿಹಕೆ' ಬಂದ ಪ್ರೇಕ್ಷಕರಿಗೆ ನಿರಾಶೆ
ವೈಟ್ ಆಂಡ್ ಗ್ರೇ ಫಿಲಂಸ್ ನಿರ್ಮಿಸಿರುವ ಈ ಚಿತ್ರವನ್ನು ಸೂರಜ್ ಗೌಡ ನಿರ್ದೇಶನ ಮಾಡಿದ್ದಾರೆ. ಎರಡು ವರ್ಷಗಳ ಹಿಂದೆ ಚಿತ್ರ ಪ್ರಾರಂಭವಾದಾಗ ನಿರ್ದೇಶಕರಾಗಿ ಸುಮನ್ ಜಾದೂಗರ್ ಇದ್ದರು. ಆದರೆ, ಅವರಿಗೆ ಅಪಘಾತವಾಗಿ ಚಿತ್ರೀಕರಣ ಮುಂದುವರೆಸುವುದಕ್ಕೆ ಕಷ್ಟವಾದ ಕಾರಣ, ನಿರ್ದೇಶನದ ಜವಾಬ್ದಾರಿಯನ್ನು ಸೂರಜ್ಗೆ ನೀಡಲಾಯಿತು. ಚಿತ್ರಕ್ಕೆ ಸೂರಜ್ ಬರೀ ಹೀರೋ ಅಷ್ಟೇ ಅಲ್ಲ, ಕಥೆ ಸಹ ಅವರದ್ದೇ. ಹಾಗಾಗಿ, ಈ ಚಿತ್ರ ನಿರ್ದೇಶಿಸುವುದಕ್ಕೆ ಅವರೇ ಸರಿ ಎಂಬ ಕಾರಣಕ್ಕೆ ಅವರಿಗೆ ನಿರ್ದೇಶನದ ಜವಾಬ್ದಾರಿ ವಹಿಸಲಾಯಿತು.
ಸೂರಜ್ ಈ ಚಿತ್ರದಲ್ಲಿ ಕಥೆ, ನಿರ್ದೇಶನ ಮತ್ತು ನಟನೆಯ ಮೂರು ಜವಾಬ್ದಾರಿಗಳನ್ನು ಹೊತ್ತಿದ್ದರು. ಧನ್ಯಾ ರಾಮ್ಕುಮಾರ್ ಮತ್ತು ಸೂರಜ್ ಗೌಡ ಅಲ್ಲದೆ, ಅರುಣಾ ಬಾಲರಾಜ್, ಚಿತ್ಕಲಾ ಬಿರಾದರ್, ಮಂಜುನಾಥ ಹೆಗಡೆ ಸೇರಿದಂತೆ ಹಲವರು ನಟಿಸಿರುವ 'ನಿನ್ನ ಸನಿಹಕೆ' ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತ ಸಂಯೋಜಿಸಿದ್ದಾರೆ. ಅಭಿಲಾಷ್ ಕಲತ್ತಿ ಛಾಯಾಗ್ರಹಣ ಮಾಡಿದ್ದಾರೆ.