‘ವಿಷ್ಣು ಸರ್ಕಲ್’ ನವರಸ ನಾಯಕ ಜಗ್ಗೇಶ್ ಅವರ ಮೊದಲ ಪುತ್ರ ಗುರುರಾಜ್ ಅಭಿನಯದ ಸಿನಿಮಾ. ಅಲ್ಲದೇ ಈ ಸಿನಿಮಾದಲ್ಲಿ ಡಾ. ವಿಷ್ಣುವರ್ಧನ್ ಅಭಿಮಾನಿಯಾಗಿ ಗುರುರಾಜ್ ಕಾಣಿಸಿಕೊಳ್ಳುತ್ತಿದ್ದಾರೆ. 1993ರಲ್ಲಿ ಬಾಲ ಕಲಾವಿದ ಆಗಿ ಗುರುರಾಜ್ ಜಗ್ಗೇಶ್ ಪುಟ್ಟ ಹೆಜ್ಜೆ ಇಟ್ಟಿದ್ದರು. 'ವಿಷ್ಣು ಸರ್ಕಲ್' ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದ ನವರಸ ನಾಯಕ ಜಗ್ಗೇಶ್, ಸಾಹಸ ಸಿಂಹ ವಿಷ್ಣುವರ್ಧನ್ರನ್ನು ಹಾಗೂ ಅವರಿದ್ದಾಗ ಸಿನಿಮಾ ರಂಗದಲ್ಲಿ ಇದ್ದ ವಾತಾವರಣವನ್ನು ನೆನೆದರು.
ಆಗ ಡಾ. ರಾಜ್, ಡಾ. ವಿಷ್ಣು ಬರುತ್ತಾ ಇದ್ದರು ಅಂದರೆ ಯಾವ ಬ್ಲಾಕ್ ಕ್ಯಾಟ್ ಸಹ ಹಿಂದೆ ಮುಂದೆ ಇರುತ್ತಿರಲಿಲ್ಲ. ಈಗಿನ ನಾಯಕರಿಗೆ ಎಂಟು ಹತ್ತು ಬ್ಲಾಕ್ ಕ್ಯಾಟ್. ಅಣ್ಣಾವ್ರು, ವಿಷ್ಣು ಅವರಿಗೆ ಅವರೇ ಸಿಂಹ ಹಾಗೂ ಹುಲಿ ಇದ್ದಂತೆ. ಅವರನ್ನ ನೋಡಿ ಅಕ್ಕ ಪಕ್ಕದವರೆಲ್ಲ ಸೈಡ್ ಹೋಗಿ ಬಿಡುತ್ತಾ ಇದ್ದರು. ಅಭಿಮಾನಿಗಳು ಅವರನ್ನು ಅಷ್ಟು ಇಷ್ಟ ಪಡುತ್ತಾ ಇದ್ದರು. ಈ ಸಿನಿಮಾ 'ವಿಷ್ಣು ಸರ್ಕಲ್' ನಿಜಕ್ಕೂ ಡಾ. ವಿಷ್ಣುವರ್ಧನ್ ಅವರನ್ನು ನೆನಪಿಸುತ್ತದೆ ಎಂದರು.
ನನಗೆ ನಿಜ ಜೀವನದಲ್ಲಿ ವಿಷ್ಣು ಸರ್ ಜೊತೆ ಅಭಿನಯಿಸಲು ಸಾಧ್ಯವಾಗಲಿಲ್ಲ. ಅಣ್ಣಾವ್ರ ‘ಜೀವನ ಚೈತ್ರ’ ಸಿನಿಮಾದಲ್ಲಿ ಅವಕಾಶ ಸಹ ಟೆನ್ನಿಸ್ ಕೃಷ್ಣ ಪಾಲಾಯಿತು. ಆದರೆ ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ನಟಿಸಿದ್ದ, 1979ರಲ್ಲಿ ತೆರೆ ಕಂಡ ‘ವಿಜಯ್ ವಿಕ್ರಮ್’ ಚಿತ್ರದ ಚಿತ್ರೀಕರಣದ ವೇಳೆ ವಿಷ್ಣು ಸರ್ ಅವರೊಂದಿಗೆ ಮೊದಲ ಭೇಟಿಯಾಯಿತು. ಆಮೇಲೆ ಅವರೊಂದಿಗೆ ಆತ್ಮೀಯತೆ ಬೆಳೆಯುತ್ತಾ ಹೋಯಿತು. ಅಲ್ಲಿಂದ ವಿಷ್ಣುವರ್ಧನ್ ಜೊತೆ ಒಟ್ಟಿಗೆ ಊಟ ಮಾಡುವ ಮಟ್ಟಿಗೆ ಹತ್ತಿರದ ಬಾಂಧವ್ಯವನ್ನ ನಾನು ಹೊಂದಿದ್ದೆ. ನಾನು ಹಾಗೂ ನನ್ನ ಮಡದಿ ಪರಿಮಳ ‘ನಾಗರಹಾವು’ ಚಿತ್ರವನ್ನೂ ಆಗಿನ ಕಾಲಕ್ಕೆ ಅದೆಷ್ಟು ಸರಿ ನೋಡಿದ್ದೆವೋ ಲೆಕ್ಕವೇ ಇಲ್ಲ ಎಂದರು.
ಒಮ್ಮೆ ನನ್ನ ಚಿಕ್ಕ ಮಗ ಯತೀಂದ್ರ, ಡಾ. ವಿಷ್ಣು ಅವರನ್ನು ಭೇಟಿ ಮಾಡಬೇಕು ಅಂತ ಹಠ ಹಿಡಿದ. ಆಗ ಅವರ ಮನೆಗೆ ಹೋಗಿ ಎರಡು ತಾಸು ಇದ್ದು ಊಟ ಮಾಡಿಕೊಂಡು ಬಂದಿದ್ವಿ. ಆಮೇಲೆ ನನ್ನ ಅಕ್ಕನ ಮಗ ಜೀವನ್ ಎಂಜಿನಿಯರಿಂಗ್ ಸೀಟ್ ಬೇಕು ಅಂದಾಗ ವಿಷ್ಣು ಸರ್ ಮನೆಗೆ ಹೋದೆ. ಅವರು ಸಹಾಯ ಮಾಡಿದರು. ಆನಂತರ ಮತ್ತೆ 2009ರ ಸೆಪ್ಟೆಂಬರ್ 18 ಅವರ ಹುಟ್ಟುಹಬ್ಬದಂದು ಸಹ ಭೇಟಿ ಮಾಡಿದಾಗ ನನಗೆ ಅವರು ಒಂದು ಭವಿಷ್ಯ ಹೇಳಿದ್ದರು. ಜಗ್ಗೇಶ್ ನೀವು ದೊಡ್ಡ ವ್ಯಕ್ತಿ ಆಗ್ತೀರ, ಒಳ್ಳೊಳ್ಳೆ ಕೆಲಸ ಮಾಡ್ತೀರ ಅಂದಿದ್ದರು. ಅದು ನಿಜವಾಯಿತು. ಮೈಸೂರಿನಲ್ಲಿ ಒಂದೂವರೆ ಎಕರೆ ಜಾಗದಲ್ಲಿ ಕಲ್ಯಾಣ ಮಂಟಪ ಕಟ್ಟಿಸಿದೆ, ನಮ್ಮ ಊರಿನಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸಹಾಯ ಮಾಡಿದೆ ಎಂದು ಹೀಗೆ ಪಟ್ಟಿ ಮಾಡುತ್ತಾ ಹೋದ ನಟ ಜಗ್ಗೇಶ್, ಅವರ 36 ವರ್ಷಗಳ ಸಿನಿಮಾ ಜರ್ನಿಯಲ್ಲಿ ವಿಷ್ಣು ಅವರನ್ನು ಭೇಟಿ ಆಗಿದ್ದನ್ನು ನೆನೆದರು.