ಕನ್ನಡ ಚಿತ್ರರಂಗದಲ್ಲಿ ನಾಯಕತ್ವದ ಕೊರತೆ ಇದೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಅದಕ್ಕೆ ಉದಾರಹಣೆ ಎಂಬಂತೆ ಕಳೆದ ಒಂದು ವಾರದಿಂದ ಸಂಚಲನ ಸೃಷ್ಟಿಸಿರುವ 25 ಕೋಟಿ ರೂ. ಶ್ಯೂರಿಟಿ ವಿಚಾರ ಹಾಗೂ ನಟ ದರ್ಶನ್ ಮತ್ತು ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಧ್ಯೆ ನಡೆಯುತ್ತಿರುವ ಮಾತಿನ ಸಮರ.

ಇಂತಹ ಸಮಯದಲ್ಲಿ ಚಿತ್ರರಂಗದ ಹಿರಿಯ ನಾಯಕರು ಅಂತಾ ಇದ್ದಿದ್ರೆ, ಈ ಸಮಸ್ಯೆಯನ್ನು ಬಗೆಹರಿಸುವ ಕೆಲಸ ಆಗುತ್ತಿತ್ತು. ಆದರೆ ಚಿತ್ರರಂಗದಲ್ಲಿ ನಾಯಕತ್ವದ ಕೊರತೆ ಇರೋದ್ರಿಂದ ದರ್ಶನ್ ಮತ್ತು ಇಂದ್ರಜಿತ್ ಲಂಕೇಶ್ ಪ್ರಕರಣ ದೊಡ್ಡದಾಗಿ ಬೆಳೆಯುತ್ತಲೇ ಇದೆ.
ಈ ಸಮಯದಲ್ಲಿ ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್ ಕಾಲದಲ್ಲಿ ಇದ್ದಂತಹ ಚಿತ್ರರಂಗದ ಒಗ್ಗಟ್ಟು ನೆನಪಾಗುತ್ತೆ. ಅಂದು ರಾಜ್ ಕುಮಾರ್ ಮಾತಿಗೆ ಇಡೀ ಕನ್ನಡ ಚಿತ್ರರಂಗ ಹಾಗು ನಟ, ನಟಿಯರು ಬೆಲೆ ಕೊಡುತ್ತಿದ್ದರು. ಈ ಮಾತಿಗೆ ಪೂರಕ ಎಂಬಂತೆ 1989ರಲ್ಲಿ ನಟ ರವಿಚಂದ್ರನ್ ವಿವಾದದಲ್ಲಿ ಸಿಲುಕಿಕೊಂಡಿದ್ದಾಗ, ರಾಜಣ್ಣ ಅವರು ಮಧ್ಯಸ್ಥಿಕೆ ವಹಿಸಿ, ವಿವಾದ ಇತ್ಯರ್ಥ ಮಾಡಿದ್ದ ಸಂಗತಿ ನೆನಪಾಗುತ್ತದೆ.
ಅಂದು ಡಾ. ರಾಜ್ಕುಮಾರ್ ಅವರು ರವಿಚಂದ್ರನ್ ಪರವಾಗಿ ನಿಂತು ಸಮಸ್ಯೆ ಬಗೆಹರಿಸಿದ್ದರು. ಅಣ್ಣಾವ್ರು ಮಾಡಿದ ಆ ಕೆಲಸ ಚಿತ್ರರಂಗದರು ನಾವೆಲ್ಲ ಒಂದೇ ಎಂಬ ಭಾವನೆ ಮೂಡಿಸಿತ್ತು. ಆದರೆ ಇಂದು ಕನ್ನಡ ಚಿತ್ರರಂಗ ಸರಿಯಾದ ನಾಯಕನಿಲ್ಲದೆ ದಿಕ್ಕು ತಪ್ಪುತ್ತಿದೆ.