ಎವರ್ಗ್ರೀನ್ ಯೂನಿವರ್ಸಲ್ ಸ್ಟಾರ್ ಅನಂತ್ನಾಗ್ ಅಭಿನಯಕ್ಕೆ ಮನಸೋಲದವರೇ ಇಲ್ಲ. 70 ವರ್ಷ ವಯಸ್ಸಾದರೂ ಅವರ ಚಾರ್ಮ್ ಇನ್ನೂ ಕಡಿಮೆಯಾಗಿಲ್ಲ. ಇವರ ಅಭಿನಯ ಅದೇಷ್ಟೋ ನಟರಿಗೆ ಸ್ಫೂರ್ತಿಯಾಗಿರುವುದೂ ಉಂಟು.
ನಟ ಯಶ್ ಕೂಡಾ ಅನಂತ್ನಾಗ್ ಅವರ ಅಪ್ಟಟ ಅಭಿಮಾನಿ. ನಾನು ಅನಂತ್ನಾಗ್ ಅವರಿಂದ ಸಾಕಷ್ಟು ಕಲಿತಿದ್ದೇನೆ. ನಟನೆಗೆ ಅನಂತ್ನಾಗ್ ಅವರು ಗುರು ಇದ್ದಂತೆ ಎಂದು ಹೇಳಿದ್ದರು. ಈಗ ಮತ್ತೊಬ್ಬ ನಟ, ನಿರ್ದೇಶಕ ಕೂಡಾ ನಟನೆಯಲ್ಲಿ ಅನಂತ್ನಾಗ್ ನನಗೆ ಸ್ಫೂರ್ತಿ ಎಂದು ಹೇಳಿದ್ದಾರೆ. ಹೌದು, 50 ದಿನಗಳನ್ನು ಪೂರೈಸಿದ 'ಬೆಲ್ ಬಾಟಂ' ಡಿಟೆಕ್ಟಿವ್ ದಿವಾಕರನಿಗೆ ಹಿರಿಯ ನಟ ಅನಂತ್ನಾಗ್ ಸ್ಫೂರ್ತಿಯಂತೆ. ಈ ವಿಚಾರವನ್ನು ರಿಷಭ್ ಶೆಟ್ಟಿ ಅವರೇ ಹೇಳಿಕೊಂಡಿದ್ದಾರೆ.
ಒಂದು ಪ್ರಮುಖ ಪಾತ್ರದಲ್ಲಿ ನಟಿಸುವಾಗ ನಮಗೆ ಜವಾಬ್ದಾರಿ ಹೆಚ್ಚಾಗಿರುತ್ತದೆ. ಇದಕ್ಕೆ ಮೊದಲೇ ತಯಾರಿ ಕೂಡಾ ನಡೆಸಬೇಕಿರುತ್ತದೆ. ಇನ್ನು ಈ ವಿಚಾರದಲ್ಲಿ ಅನಂತ್ನಾಗ್ ಅವರ ಜೊತೆ ನಾನು ಕೆಲಸ ಮಾಡಿದ್ದು ನನಗೆ ಬಹಳ ಹೆಲ್ಪ್ ಆಯ್ತು. ಅನಂತ್ನಾಗ್ ಅವರು ನಟನೆಗೆ ವಿಶ್ವವಿದ್ಯಾಲಯ ಇದ್ದಂತೆ. ಅವರಿಂದ ಕಲಿಯುವುದು ಬಹಳಷ್ಟಿದೆ. ಒಂದು ಚಿಕ್ಕ ದೃಶ್ಯಕ್ಕೂ ಸಾಕಷ್ಟು ತಯಾರಿ ಮಾಡಿಕೊಂಡು ಅಭಿನಯಿಸುತ್ತಾರೆ. ಸಹ ಕಲಾವಿದರ ಜೊತೆ ರಿಹರ್ಸಲ್ ಮಾಡಿ ಪಾತ್ರಕ್ಕೆ ಜೀವ ತುಂಬುತ್ತಾರೆ.
ನಾನು ಮೊದಲಿನಿಂದಲೂ ಅನಂತ್ನಾಗ್ ಅಭಿಮಾನಿ. ಅದರಲ್ಲೂ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಚಿತ್ರದಲ್ಲಿ ಅವರ ಅಭಿನಯ ನೋಡಿದ ಮೇಲೆ ನಾನು ಅವರಿಂದ ಸಾಕಷ್ಟು ಸ್ಫೂರ್ತಿ ಪಡೆದು 'ಬೆಲ್ ಬಾಟಂ' ಚಿತ್ರದಲ್ಲಿ ನಟಿಸಿದ್ದೇನೆ. ಯಾರಾದ್ರೂ ಆ್ಯಕ್ಟಿಂಗ್ ಕೋರ್ಸ್ಗೆ ಸೇರಬೇಕು ಎಂದುಕೊಂಡಿರುವವರು ಅನಂತ್ನಾಗ್ ಅವರ ಅಭಿನಯ ನೋಡಿದ್ರೆ ಸಾಕು, ಅದರಿಂದ ಸಾಕಷ್ಟು ಕಲಿಯಬಹುದು ಎಂದು ಅನಂತ್ ಅವರನ್ನು ಹೊಗಳಿದ್ದಾರೆ ರಿಷಭ್.