ಬೆಂಗಳೂರು: ಸದಾ ಫಿಟ್ ಆಗಿದ್ದು, ನಿರಂತರ ವ್ಯಾಯಾಮ ಮಾಡುತ್ತಿದ್ದ ನಟ ಚಿರಂಜೀವಿ ಸರ್ಜಾ ಸಾವು ಅನಿರೀಕ್ಷಿತವಾದದ್ದು. 39ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ನಟ ಚಿರು ಸಾವಿನ ಬಗ್ಗೆ ಅಪೋಲೋ ಆಸ್ಪತ್ರೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಚಿರಂಜೀವಿ ಸರ್ಜಾ ಅವರನ್ನು ಮಧ್ಯಾಹ್ನ 2.20ರ ವೇಳೆಗೆ ಆಸ್ಪತ್ರೆಗೆ ಕರೆತರಲಾಯಿತು. ಈ ವೇಳೆ ಅವರ ಪಲ್ಸ್ ರೇಟ್ ಕಡಿಮೆ ಆಗಿತ್ತು. ಹೀಗಾಗಿ ಆಸ್ಪತ್ರೆಗೆ ಕರೆತಂದ ತಕ್ಷಣ ಅವರನ್ನು ಎಮರ್ಜೆನ್ಸಿ ವಾರ್ಡ್ಗೆ ಶಿಫ್ಟ್ ಮಾಡಲಾಯ್ತು. ಅವರನ್ನು ಟ್ರಿಯೇಜ್ ಏರಿಯಾಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಯಿತು.
ಚಿಕಿತ್ಸೆ ವೇಳೆ ನಾಡಿ ಬಡಿತ ಹೆಚ್ಚಿಸಲು ಪ್ರಯತ್ನ ಮಾಡಲಾಯ್ತು. ಸಿಪಿಆರ್ ಮೂಲಕ ನಾಡಿ ಬಡಿತವನ್ನು ಹತೋಟಿಯಲ್ಲಿಡಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. 3 ಗಂಟೆ 48 ನಿಮಿಷದವರೆಗೂ ನಡೆದ ನಿರಂತರ ಪ್ರಯತ್ನದಲ್ಲಿ 3 ಬಾರಿ ನಾಡಿ ಬಡಿತ ಹೆಚ್ಚಿಸಲು ಯಶಸ್ವಿಯಾದೆವು. ಆದರೆ ಸ್ಥಿರವಾಗಿ ನಿಲ್ಲಲಿಲ್ಲ. ಕಡೆಯದಾಗಿ 3.48ಕ್ಕೆ ಚಿರಂಜೀವಿ ಸರ್ಜಾ ನಿಧನಹೊಂದಿದ್ದಾರೆ ಎಂದು ಘೋಷಿಸಿದೆವು ಎಂದು ಅಪೋಲೋ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.