ಹಲವು ವರ್ಷಗಳ ಹಿಂದೆ ಟೆಕ್ಸ್ಟೈಲ್ ಬ್ಯುಸ್ನೆಸ್ ಮಾಡುತ್ತಿದ್ದ ಅಜಿತ್, ಇಂದು ತಮಿಳುನಾಡಿನ ಸ್ಟಾರ್ ನಟರಾಗಿ ಹೆಸರು ಮಾಡಿದ್ದಾರೆ. ಅಜಿತ್ ,ಚಿತ್ರರಂಗದಲ್ಲಿ ಮಾತ್ರವಲ್ಲ ಕ್ರೀಡಾರಂಗದಲ್ಲಿ ಕೂಡಾ ಗುರುತಿಸಿಕೊಂಡಿದ್ದಾರೆ. ಮೊದಲಿನಿಂದಲೂ ಕ್ರೀಡೆಯಲ್ಲಿ ಆಸಕ್ತಿ ಇದ್ದ ಅಜಿತ್, ಆ್ಯಕ್ಟರ್ ಆದ ನಂತರ ಕೂಡಾ ಆ್ಯಕ್ಟಿಂಗ್ ಹಾಗೂ ಕ್ರೀಡೆ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಾ ಬಂದಿದ್ದಾರೆ.

ಇದನ್ನೂ ಓದಿ: 'ಕೋಟಿಗೊಬ್ಬ-3' ಆಯ್ತು ಈಗ 'ರಾಬರ್ಟ್' ಸರದಿ....3 ಕಂತುಗಳಲ್ಲಿ ಮೇಕಿಂಗ್ ವಿಡಿಯೋ ರಿಲೀಸ್
ಮಾರ್ಚ್ 2 ರಿಂದ 7ವರೆಗೆ ತಮಿಳುನಾಡಿನಲ್ಲಿ ನಡೆದ 46ನೇ ತಮಿಳುನಾಡು ರಾಜ್ಯ ಶೂಟಿಂಗ್ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಜಿತ್ ಚಿನ್ನದ ಪದಕ ಸೇರಿ ಒಟ್ಟು 6 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಜಿತ್ ಪದಕ ಪಡೆಯುತ್ತಿರುವ, ಪದಕದೊಂದಿಗೆ ನಿಂತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಒಬ್ಬ ಸ್ಟಾರ್ ನಟನಾಗಿದ್ದರೂ ಅಜಿತ್ಗೆ ಕ್ರೀಡೆಯಲ್ಲಿ ಇಷ್ಟು ಆಸಕ್ತಿ ಹೊಂದಿರುವ ವಿಚಾರ ತಿಳಿದು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅಜಿತ್, ಶೂಟಿಂಗ್ ಮಾತ್ರವಲ್ಲದೆ ಕಾರ್ ರೇಸ್, ಬೈಕ್ ರೇಸ್ನಲ್ಲಿ ಕೂಡಾ ಆಸಕ್ತಿ ಹೊಂದಿದ್ದಾರೆ. ಇತ್ತೀಚೆಗಷ್ಟೇ ಹೈದರಾಬಾದ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಅಜಿತ್, ಚೆನ್ನೈಗೆ ಬೈಕ್ನಲ್ಲೇ ತೆರಳಿ ಸುದ್ದಿಯಾಗಿದ್ದರು. ಶೂಟಿಂಗ್ ಜೊತೆ ಜೊತೆಗೆ ಬಿಡುವಿನ ಸಮಯದಲ್ಲಿ ಮೆಚ್ಚಿನ ಆಟವನ್ನೂ ಅಭ್ಯಾಸ ಮಾಡಿ ಮೆಡಲ್ ಗೆದ್ದಿದ್ದಾರೆ ಎಂದರೆ ಅಜಿತ್ಗೆ ಕ್ರೀಡೆ ಮೇಲೆ ಎಷ್ಟು ಆಸಕ್ತಿ ಇದೆ ಎಂಬುದು ತಿಳಿಯುತ್ತದೆ. ಸಿನಿಮಾ ವಿಚಾರಕ್ಕೆ ಬರುವುದಾದರೆ 2019ರಲ್ಲಿ ಅಜಿತ್ ಅಭಿನಯದ 'ನೇರ್ಕೊಂಡ ಪಾರ್ವೈ' ಬಿಡುಗಡೆಯಾಗಿತ್ತು. ಆ ಚಿತ್ರದ ನಂತರ ಅಜಿತ್ ಅಭಿನಯದ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ. ಸದ್ಯಕ್ಕೆ ಅವರು 'ವಾಲಿಮೈ' ಚಿತ್ರದಲ್ಲಿ ಬ್ಯುಸಿ ಇದ್ದಾರೆ.

