ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬ ಅಂದ್ರೆ ಸಾಕು ಅವರ ಅಭಿಮಾನಿಗಳ ಪಾಲಿಗೆ ಬಹುದೊಡ್ಡ ಹಬ್ಬವಿದ್ದಂತೆ. ಮಂಡ್ಯದ ಗಂಡು ಇಂದು ಬದುಕಿದ್ದರೆ 69ನೇ ವರ್ಷದ ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದರು. ಆದರೆ ರೆಬೆಲ್ ಸ್ಟಾರ್ ನಮ್ಮೆಲ್ಲರನ್ನೂ ಅಗಲಿ ಎರಡುವರೆ ವರ್ಷ ತುಂಬುತ್ತಿದೆ.
ಮಂಡ್ಯದ ಗಂಡು ಇಲ್ಲದೇ ಅವರ ಸ್ಮಾರಕದ ಹತ್ತಿರ ನೂರಾರು ಅಭಿಮಾನಿಗಳು ಹುಟ್ಟುಹಬ್ಬ ಆಚರಿಸುತ್ತಿದ್ದರು. ಆದರೆ ಕೊರೊನಾದಿಂದಾಗಿ ಈ ವರ್ಷ ಕೂಡ ಅಂಬಿ ಬರ್ತ್ಡೇ ಆಚರಿಸಲು ಸಾಧ್ಯವಾಗುತ್ತಿಲ್ಲ ಅನ್ನೋದು ನೋವಿನ ವಿಚಾರ.
ಖಳನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ
ಖಳನಾಯಕನಾಗಿ ಚಿತ್ರರಂಗಕ್ಕೆ ಕಾಲಿರಿಸಿದ ಬಳಿಕ ಪೋಷಕ ನಟರಾಗಿ, ನಾಯಕ ನಟರಾಗಿ ಕೋಟ್ಯಾಂತರ ಅಭಿಮಾನಿಗಳ ಜನಮಾನಸದಲ್ಲಿ ಉಳಿದಿದ್ದಾರೆ. ರೆಬೆಲ್ ಸ್ಟಾರ್, ಕನ್ವರ್ ಲಾಲ್, ಮಂಡ್ಯದ ಗಂಡು, ಕಲಿಯುಗದ ಕರ್ಣ ಹೀಗೆ ಹಲವಾರು ಹೆಸರುಗಳಿಂದ ಕರೆಯಿಸಿಕೊಳ್ಳುತ್ತಿದ್ದ ಏಕೈಕ ನಟ ಅಂಬರೀಶ್. ಕನ್ನಡ ಚಿತ್ರರಂಗದ ಹಿರಿಯಣ್ಣ ಎಂದು ಕರೆಯಿಸಿಕೊಂಡಿದ್ದ ಅಂಬಿ ಬಗ್ಗೆ ಯಾರಿಗೂ ಗೊತ್ತಿಲ್ಲದ ಕೆಲವೊಂದು ಅಚ್ಚರಿ ಸಂಗತಿ ನಾವು ಹೇಳುತ್ತೇವೆ.
ಚಿಕ್ಕಪಾತ್ರದಲ್ಲೇ ರಾತ್ರೋ ರಾತ್ರಿ ದೊಡ್ಡ ಹೆಸರು
ಅಮರನಾಥ ಎಂಬ ಮೂಲ ಹೆಸರು ಹೊಂದಿದ್ದ ಅಂಬರೀಶ್ ಚಿತ್ರರಂಗಕ್ಕೆ ಕಾಲಿಟ್ಟಿದ್ದು ನಾಗರಹಾವು ಸಿನಿಮಾ ಮೂಲಕ. ವಿಷ್ಣುವರ್ಧನ್ ಕೂಡ ನಟನಾಗಿ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪ್ರವೇಶಿಸಿದ್ರು. ಅಂಬಿ ವಿಲನ್ ಆಗಿ ಈ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡುತ್ತಾರೆ. ಅಂಬಿ ಅವರದ್ದು ಈ ಚಿತ್ರದಲ್ಲಿ ಚಿಕ್ಕಪಾತ್ರವಾಗಿದ್ರೂ ರಾತ್ರೋ ರಾತ್ರಿ ದೊಡ್ಡ ಮಟ್ಟದ ಹೆಸರು ತಂದು ಕೊಡುತ್ತದೆ. ಎಲ್ಲರಿಗೂ ಗೊತ್ತಿರುವ ಹಾಗೇ, ಅಂಬಿ ನಾಗರಹಾವು ಸಿನಿಮಾದಲ್ಲಿ ನಟಿ ಆರತಿ ಅವರನ್ನು ಚುಡಾಯಿಸುವ ದೃಶ್ಯವಿದೆ. ಆದರೆ ಅಂಬಿ ಈ ಸಿನಿಮಾದಲ್ಲಿ ನಟಿಸುವ ಮೊದಲೇ ಆರತಿಯನ್ನು ಚುಡಾಯಿಸುತ್ತಿದ್ದರಂತೆ. ಈ ವಿಷ್ಯ ಅದೆಷ್ಟೋ ಜನರಿಗೆ ಗೊತ್ತೆ ಇಲ್ಲ.
ಅಂಬರೀಶ್-ಆರತಿ ಓದಿದ್ದು ಒಂದೇ ಕಾಲೇಜ್
ಅಂಬರೀಶ್ ಮತ್ತು ಆರತಿ ಓದಿದ್ದು ಒಂದೇ ಕಾಲೇಜಿನಲ್ಲಿ. ಕಾಲೇಜು ಕ್ಯಾಂಪಸ್ನಲ್ಲಿ ಆರತಿ ಎದುರಾದಾಗ ಅಂಬಿ ಯಾವಾಗಲೂ ಅವರನ್ನು ಚುಡಾಯಿಸುತ್ತಿದ್ದರಂತೆ. ಈ ವಿಷಯವನ್ನ ಸ್ವತಃ ಅಂಬರೀಶ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಇಡ್ಲಿಗೋಸ್ಕರ ಮನೆಯಲ್ಲಿ ಗಲಾಟೆ
ಇನ್ನು ಅಂಬರೀಶ್ ಹುಟ್ಟಿದಾಗಲೇ, ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡು ಶ್ರೀಮಂತರ ಕುಟುಂಬದಲ್ಲಿ ಹುಟ್ಟಿದ ಅದೃಷ್ಟವಂತ. ಊಟ ಮಾಡುವ ವಿಚಾರದಲ್ಲಿ ಅಂಬರೀಶ್ ಅವರ ಅಣ್ಣನ ಹತ್ತಿರ ಗಲಾಟೆ ಮಾಡಿಕೊಂಡಿದ್ದರಂತೆ. ಅದು 120 ಇಡ್ಲಿಗೋಸ್ಕರ. ಮನೆಯಲ್ಲಿ ಇಡ್ಲಿ ಮಾಡಿದಾಗ ಅಂಬಿಗೆ ಬರೋಬ್ಬರಿ 120 ಇಡ್ಲಿ ಬೇಕಿತ್ತಂತೆ. ದೋಸೆ ಮಾಡಿದ್ರೆ ಕಡಿಮೆ ಅಂದ್ರೂ 45 ತಿನ್ನುತ್ತಿದ್ದರಂತೆ. ಚಿಕ್ಕಂದಿನಿಂದ ಇದೇ ವಿಚಾರವಾಗಿ ಅಂಬರೀಶ್ ಮನೆಯವರ ಜೊತೆ ಜಗಳ ಮಾಡಿಕೊಂಡಿದ್ರಂತೆ. ಕಾಲೇಜ್ ದಿನಗಳಲ್ಲಿ ಅಂಬರೀಶ್ ಪಿಯುಸಿಯಲ್ಲಿ ಫೇಲ್ ಆದಾಗ, ಪ್ರಾಂಶುಪಾಲರು ನಿಮ್ಮ ತಂದೆಯವರನ್ನ ಕರೆದುಕೊಂಡು ಬನ್ನಿ ಎಂದು ಹೇಳಿದ್ರಂತೆ. ಆಗ ಅಂಬರೀಶ್ತನ್ನ ಸ್ನೇಹಿತನನ್ನೇ ಅಣ್ಣನೆಂದು ಕರ್ಕೊಂಡು ಹೋಗಿದ್ರಂತೆ.
ಕಾಲೇಜ್ನಲ್ಲಿ ತರ್ಲೆ, ತಮಾಷೆ
ಒಂದು ದಿನ ಅಂಬರೀಶ್ ಅವರ ನಿಜವಾದ ಅಣ್ಣ, ಕಾಲೇಜ್ಗೆ ಬಂದಾಗ ಅಂಬಿ ನಿಜವಾದ ಬಣ್ಣ ಬಯಲಾಗಿತ್ತಂತೆ. ಇನ್ನು ಕಾಲೇಜ್ ದಿನಗಳಲ್ಲಿ ತರ್ಲೆ, ತಮಾಷೆ ಮಾಡುತ್ತಾ ದಿನಗಳನ್ನ ಕಳೆದಿದ್ದಾರೆ. ಆದರೆ ಶಾಲಾ ದಿನಗಳಲ್ಲಿ ಅಂಬಿ ಆಟ ಮತ್ತು ಪಾಠ ಎರಡರಲ್ಲೂ ಫಸ್ಟ್ ಅಂತೆ. ಎಲ್ಲ ಆಟಗಳಲ್ಲೂ ಭಾಗವಹಿಸುತ್ತಿದ್ದ ಇವರು, ಓದಿನಲ್ಲೂ ಫಸ್ಟ್ ಕ್ಲಾಸ್ ವಿದ್ಯಾರ್ಥಿಯಂತೆ. ಗಣಿತದಲ್ಲಿ 100ಕ್ಕೆ 100ರಷ್ಟು ಅಂಕ ಪಡೆದುಕೊಂಡಿದ್ದರಂತೆ.
ಅಂಬಿಕಾಗೆ ಲವ್ ಪ್ರಪೋಸ್
ಚಕ್ರವ್ಯೂಹ ಸಿನಿಮಾದ ಚಳಿ ಚಳಿ ತಾಳೆನು, ಈ ಚಳಿಯ ಎಂಬ ಹಾಡು ಈಗಲೂ ಎಲ್ಲರ ಫೇವರೇಟ್... ಇದ್ರಲ್ಲಿ ಅಂಬರೀಶ್ ಮತ್ತು ಅಂಬಿಕಾ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದರು. ಈ ಹಾಡಿನಂತೆ, ಆ ಕಾಲದಲ್ಲಿ ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು. ಆಗ ಅಂಬರೀಶ್ ಅಂಬಿಕಾಗೆ ನಿಜವಾಗಿ ಲವ್ ಪ್ರಪೋಸ್ ಮಾಡಿದ್ರಂತೆ. ಕನ್ನಡ ಚಿತ್ರರಂಗದಲ್ಲಿ ಆ ಕಾಲದಲ್ಲಿ ಈ ವಿಷಯ ಬ್ರೇಕಿಂಗ್ ನ್ಯೂಸ್ ಆಗಿತ್ತಂತೆ.
ಅತಿ ಹೆಚ್ಚು ಸ್ನೇಹಿತರ ಸಂಪಾದನೆ
ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸ್ನೇಹಿತರ ಬಳಗ ಹೊಂದಿದ್ದ ಏಕೈಕ ನಟ ಅಂದ್ರೆ ಅದು ಅಂಬರೀಶ್. ಹಳ್ಳಿ, ರಾಜ್ಯ, ದೇಶ ಹಾಗೂ ವಿದೇಶಗಳಲ್ಲೂ ಸ್ನೇಹಿತರ ಬಳಗ ಹೊಂದಿದ್ದ ಸಿನಿಮಾ ಸ್ಟಾರ್ ಅಂದರೆ ಅದು ಅಂಬಿ ಮಾತ್ರ. ಅಜಾತ ಶತ್ರುವಾಗಿ ರೆಬೆಲ್ ಸ್ಟಾರ್ ಜೀವನದ ಉದ್ದಕ್ಕೂ ಬದುಕಿದ್ದರು ಅನ್ನೋದು ಅಚ್ಚರಿ ಸಂಗತಿ. ಅಂಬರೀಶ್ ಚಿಕ್ಕ ವಯಸ್ಸಿನಿಂದಲ್ಲೂ ಭೋಜನ ಪ್ರಿಯ. ಅದರಲ್ಲಿ ನಾನ್ ವೆಜ್ ಊಟ ಅಂದರೆ ಇವರಿಗೆ ಫೇವರೆಟ್. ಪ್ರಮುಖವಾಗಿ ನಾಟಿ ಕೋಳಿ ಸಾರು, ಮಟನ್ ಕೈಮಾ ಉಂಡೆ ಅಂದರೆ ಪಂಚಪ್ರಾಣ. ಒಮ್ಮೆ ಮೈಸೂರಿನಿಂದ ಸಿನಿಮಾ ಶೂಟಿಂಗ್ ಮುಗಿಸಿ, ಬೆಂಗಳೂರಿಗೆ ಬಂದು ಬೆಳಗಿನ ಜಾವ ಐದು ಗಂಟೆಗೆ, ಪತ್ನಿ ಸುಮಲತಾ ಕೈಯಲ್ಲಿ ಮನೆಯಲ್ಲಿ ಚಿಕನ್ ಕಬಾಬ್ ಮಾಡಿಸಿಕೊಂಡು ಊಟ ಸವಿದಿದ್ದರಂತೆ. ಕನ್ನಡ ಚಿತ್ರರಂಗದ ಹಿರಿಯಣ್ಣ ಅಂತಾ ಕರೆಯಿಸಿಕೊಂಡಿದ್ದ, ಅಂಬರೀಶ್ ಅವರ ಕಾರು ಕ್ರೇಜ್ ಎಷ್ಟಿತ್ತು ಅನ್ನುವುದಕ್ಕೆ ಈ ಘಟನೆ ಸಾಕ್ಷಿ.
ಕಾರು ಕೊಡಿಸಲಿಲ್ಲ ಎಂದು ಮನೆ ಬಿಟ್ಟಿದ್ದ ಅಂಬಿ
ಅಪ್ಪ ಕಾರು ಕೊಡಿಸಲಿಲ್ಲ ಎಂಬ ಕಾರಣಕ್ಕೆ ಅಂಬರೀಶ್ ಅವರು ಗಲಾಟೆ ಮಾಡಿ ಮನೆಬಿಟ್ಟು ಸುಮಾರು ಏಳು ತಿಂಗಳ ಕಾಲ ಮೈಸೂರಿನಲ್ಲಿದ್ದರು. ಕೊನೆಗೂ ಅವರ ತಂದೆ ಕಾರು ಖರೀದಿಸಲು ದುಡ್ಡು ಕೊಟ್ಟ ಬಳಿಕ ಮನೆಗೆ ವಾಪಸಾಗಿದ್ದರು. ಹಾಗೆ ಅವರು ಮೊದಲು ಖರೀದಿಸಿದ ಕಾರು ಹೆರಾಲ್ಡ್ ಅದರ ನಂಬರ್ 1011, ಆ ಬಳಿಕ ಆರು ತಿಂಗಳಿಗೊಂದರಂತೆ ಕಾರು ಬದಲಾಯಿಸಿದ್ದರು.
ಸ್ನೇಹಿತರಿಗೆ ಕೋಟ್ಯಂತರ ರೂ. ಹಣ
ಒರಟು ಮಾತು, ಮಗುವಿನಂತಹ ಮನಸ್ಸು ಹೊಂದಿದ್ದ ಅಂಬರೀಶ್ಗೆ ಸಿನಿಮಾ ನಿರ್ಮಾಪಕರಿಗೆ ಹಾಗೂ ಕೆಲ ಸ್ನೇಹಿತರಿಗೆ ಕೋಟ್ಯಂತರ ರೂಪಾಯಿ ಕೊಟ್ಟು ಮತ್ತೆ ಅದನ್ನ ವಾಪಸ್ ಪಡೆಯುವ ಪ್ರಯತ್ನ ಮಾಡಿಲ್ಲ. ಅದಕ್ಕೆ ಸಾಕ್ಷಿ ಅಂಬರೀಶ್ಗೆ ಸ್ನೇಹಿತರು ಹಾಗೂ ಸಿನಿಮಾ ಮಂದಿ ಕೊಟ್ಟ ಬೌನ್ಸ್ ಆಗಿರುವ ಚೆಕ್ಗಳು. ಈ ಎಲ್ಲ ಚೆಕ್ ಲೆಕ್ಕ ಹಾಕಿದರೆ ಏಳು ಕೋಟಿ ರೂಪಾಯಿ ಅಂಬರೀಶ್ ಅವರಿಗೆ ಬರಬೇಕಿತ್ತು.
ಹುಟ್ಟು-ಸಾವು ಅನ್ನೋದು ಆ ಬ್ರಹ್ಮನ ಲಿಖಿತ. ಆದರೆ ಅಂಬರೀಶ್ ವಿಚಾರದಲ್ಲಿ ಆ ಬ್ರಹ್ಮದೇವ ಕೂಡ, ಅವರ ಸಾವು ಬರುವ ಸೂಚನೆ ನೀಡಿದ್ದರಂತೆ. ಈ ಮಾತಿಗೆ ಪೂರಕವಾಗಿ ಉಸಿರಾಟದ ತೊಂದರೆಗೆ ಚಿಕಿತ್ಸೆ ಪಡೆಯಲು ಸಿಂಗಾಪುರಕ್ಕೆ ಹೋಗಿ ಬಂದ ಬಳಿಕ ರೆಬೆಲ್‌ಸ್ಟಾರ್ ಅಂಬರೀಷ್ ತಮ್ಮ ಆರೋಗ್ಯದ ಕುರಿತು ಸ್ವಲ್ಪ ಹೆಚ್ಚು ಚಿಂತಿತರಾಗಿದ್ದರು. ಅಂಬರೀಶ್ ಯಾವತ್ತು ಕೂಡ ತಮ್ಮ ಜಾತಕವನ್ನ ತೋರಿಸಿದ ವ್ಯಕ್ತಿ ಅಲ್ಲ. ಸಿಂಗಾಫುರಕ್ಕೆ ಹೋಗಿ ಬಂದ ಮೇಲೆ ತಮ್ಮ ಜಾತಕವನ್ನೂ ಹಲವು ಆಪ್ತರಿಗೆ ತೋರಿಸಿದ್ದರಂತೆ. ಕನ್ನಡ ಚಿತ್ರರಂಗದಲ್ಲಿ ರೆಬೆಲ್ ಸ್ಟಾರ್ ಆಗಿ ಮಿಂಚಿ, ಕೋಟ್ಯಾಂತರ ಅಭಿಮಾನಿಗಳ ಹೃದಯ ಕದ್ದ ಮಂಡ್ಯದ ಗಂಡನ ಬಗ್ಗೆ ಈ ಎಲ್ಲವೂ ಯಾರಿಗೂ ಗೊತ್ತಿಲ್ಲದ ಅಚ್ಚರಿ ಸಂಗತಿಗಳಾಗಿವೆ.