ಕನ್ನಡ ಹಾಗೂ ತೆಲುಗು ಭಾಷೆಯ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟ ಡಾಲಿ ಧನಂಜಯ್ಗೆ ಬೇಡಿಕೆ ಹೆಚ್ಚಾಗಿದೆ. ಸದ್ಯ 'ಬಡವ ರಾಸ್ಕಲ್' ಸಿನಿಮಾ ಸಕ್ಸಸ್ ಖುಷಿಯಲ್ಲಿರೋ ಡಾಲಿ ಸಂಕ್ರಾಂತಿ ಹಬ್ಬಕ್ಕೆ ಹೊಸ ಸಿನಿಮಾವನ್ನ ಅನೌನ್ಸ್ ಮಾಡಿದ್ದಾರೆ.
ಈ ಸಿನಿಮಾಗೆ 'ಹೊಯ್ಸಳ' ಅಂತಾ ಟೈಟಲ್ ಇಡಲಾಗಿದೆ. ಇದು ಧನಂಜಯ್ ನಟನೆಯ 25ನೇ ಚಿತ್ರವಾಗಿದೆ. ಸಲಗ ಸಿನಿಮಾ ಬಳಿಕ ಮತ್ತೆ ಧನಂಜಯ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬೆಳಗಾವಿಯ ಒಬ್ಬ ದಿಟ್ಟ ಪೊಲೀಸ್ ಅಧಿಕಾರಿಯ ಸುತ್ತ ಹೆಣೆದಿರುವ ಕಥೆ ಇದಾಗಿದೆ.
![25th movie of Daali Dhananjay is Hoysala](https://etvbharatimages.akamaized.net/etvbharat/prod-images/kn-bng-05-dhanajaya-announced-25th-movie-7204735_14012022172626_1401f_1642161386_330.jpg)
ಈ ಹಿಂದೆ 'ಗೀತಾ' ಸಿನಿಮಾವನ್ನ ನಿರ್ದೇಶನ ಮಾಡಿದ್ದ ವಿಜಯ್ ಎನ್ ಅವರೇ ಹೊಯ್ಸಳ ಚಿತ್ರವನ್ನ ನಿರ್ದೇಶಿಸುತ್ತಿದ್ದಾರೆ. ದಕ್ಷಿಣ ಭಾರತದ ಬಹಳ ಯಶಸ್ವಿ ಸಂಗೀತ ನಿರ್ದೇಶಕರಾದ ಎಸ್ .ಎಸ್ .ತಮನ್ ಅವರು ಈ ಚಿತ್ರಕ್ಕೆ ಮ್ಯೂಸಿಕ್ ನೀಡಲಿದ್ದಾರೆ. ದೀಪು.ಎಸ್.ಕುಮಾರ್ ಸಂಕಲನ ಹಾಗೂ ಮಾಸ್ತಿ ಅವರ ಸಂಭಾಷಣೆಯಲ್ಲಿ ಚಿತ್ರ ಮೂಡಿಬರಲಿದೆ.
ಇದನ್ನೂ ಓದಿ: ತಮ್ಮ ಸಿನಿಮಾಗಳ ಹೊಸ ಪೋಸ್ಟರ್ ಬಿಡುಗಡೆ ಮಾಡಿ ಸಂಕ್ರಾಂತಿ ಹಬ್ಬಕ್ಕೆ ಶುಭಕೋರಿದ ಉಪೇಂದ್ರ, ಗಣೇಶ್
ಚಿತ್ರದ ಬಹುತೇಕ ಚಿತ್ರೀಕರಣ ಬೆಳಗಾವಿ ಜಿಲ್ಲೆಯ ಅನೇಕ ಭಾಗಗಳಲ್ಲಿ ನಡೆಯಲಿದೆ. ಈ ಹಿಂದೆ 'ರತ್ನನ್ ಪ್ರಪಂಚ' ಸಿನಿಮಾವನ್ನ ನಿರ್ಮಾಣ ಮಾಡಿದ್ದ ನಿರ್ಮಾಪಕರಾದ ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಕೆಆರ್‌ಜಿ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆಯಿಂದ ಎರಡನೇ ಚಿತ್ರ ಇದಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಚಿತ್ರದಲ್ಲಿ ನಟಿಸಲಿರುವ ಎಲ್ಲ ಕಲಾವಿದರ ಆಯ್ಕೆಯನ್ನು ಚಿತ್ರ ನಿರ್ಮಾಣ ತಂಡ ಮಾಡುತ್ತಿದೆ. ಮುಂಬರುವ ದಿನಗಳಲ್ಲಿ 'ಹೊಯ್ಸಳ' ಸಿನಿಮಾ ಬಗ್ಗೆ ಚಿತ್ರತಂಡ ಮತ್ತಷ್ಟು ಮಾಹಿತಿ ನೀಡಲಿದೆ.