ಇದೇನಪ್ಪ, ಒಂದು ಸಿನಿಮಾದಲ್ಲಿ ಹೆಚ್ಚು ಅಂದರೆ ಮೂವರು ನಾಯಕಿಯರು ಇರುತ್ತಾರೆ. ಇದೇನಿದು, ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದಲ್ಲಿ 21 ನಾಯಕಿಯರು ಇದ್ದಾರಾ ಎಂದು ಆಶ್ಚರ್ಯ ಪಡಬೇಡಿ. ಈ ಚಿತ್ರದಲ್ಲಿ ನಟಿಸಿರುವುದು ಒಬ್ಬರೇ ನಾಯಕಿ, ಮೇಘನಾ ಗಾಂವ್ಕರ್.
![Amulya](https://etvbharatimages.akamaized.net/etvbharat/prod-images/4835946_amulya.jpg)
ಉಳಿದ 21 ನಾಯಕಿಯರು ನಟಿಸುತ್ತಿರುವುದು ಚಿತ್ರದಲ್ಲಿ ಅಲ್ಲ. ಬದಲಿಗೆ ಇವರೆಲ್ಲ ಚಿತ್ರದ ಪ್ರಮೋಷನಲ್ ಹಾಡಿನಲ್ಲಿ ಬಂದು ಹೋಗಲಿದ್ದಾರೆ. 4:30 ನಿಮಿಷ ಇರುವ ಈ ಚಿತ್ರದ ಹಾಡೊಂದರಲ್ಲಿ ಈ ನಾಯಕಿಯರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಾಡಿಗೆ ನಿರ್ದೇಶಕ ಕವಿರಾಜ್ ಅವರೇ ಸಾಹಿತ್ಯ ಬರೆದಿದ್ದಾರೆ. ಚಿತ್ರದ ಪ್ರಮೋಷನಲ್ ಹಾಡು ಭರ್ಜರಿಯಾಗಿ ಚಿತ್ರೀಕರಣವಾಗುತ್ತಿದೆ. ಈ ಮುನ್ನ 'ಮದುವೆ ಮಮತೆ ಕರೆಯೋಲೆ' ಚಿತ್ರವನ್ನು ನಿರ್ದೇಶಿಸಿದ್ದ ಕವಿರಾಜ್ಗೆ ಇದು ಎರಡನೇ ಸಿನಿಮಾ. ಇನ್ನು ಈ ಪ್ರಮೋಷನಲ್ ಹಾಡಿಗಾಗಿ ಆಯಾ ಕಲಾವಿದರು ಇರುವ ಸ್ಥಳಕ್ಕೆ ಹೋಗಿ ಹಾಡಿನ ಚಿತ್ರೀಕರಣ ಮಾಡಿಕೊಂಡು ಬರಲಾಗಿದೆ.
![Rachita ram](https://etvbharatimages.akamaized.net/etvbharat/prod-images/4835946_rachita.jpg)
ನಟಿಯರಾದ ಹರಿಪ್ರಿಯಾ, ರಚಿತಾ ರಾಮ್, ಅಮೂಲ್ಯ, ನಿಶ್ವಿಕಾ ನಾಯ್ಡು, ದಿವ್ಯ ಉರುಡುಗ, ಶುಭ ಪೂಂಜಾ, ಸಿಂಧು ಲೋಕನಾಥ್, ಹರ್ಷಿಕಾ ಪೂಣಚ್ಚ, ಕಾರುಣ್ಯ ರಾಮ್, ಅನುಪಮ ಗೌಡ, ಸಂಯುಕ್ತ ಹೊರನಾಡು, ರೂಪಿಕಾ, ಅನು ಗೌಡ, ದಿಶಾ ಪೂವಯ್ಯ, ಅದಿತಿ ಪ್ರಭುದೇವ, ಮಾನ್ವಿತ ಹರೀಶ್, ವೈಭವಿ, ವೈನಿಧಿ, ವೈಸಿರಿ, ರಾಗಿಣಿ ದ್ವಿವೇದಿ ಸೇರಿ ಇನ್ನಿತರ ನಟಿಯರು ಈ ಹಾಡಿನಲ್ಲಿ ಇರಲಿದ್ದಾರೆ ಎನ್ನಲಾಗಿದೆ. ಈ ರೀತಿಯ ಪ್ರಯತ್ನ ದೀಪಿಕಾ ಪಡುಕೋಣೆ, ಶಾರುಖ್ ಖಾನ್ ನಟನೆಯ ‘ಓಂ ಶಾಂತಿ ಓಂ’ ಚಿತ್ರದಲ್ಲಿ ಆಗಿತ್ತು. ಆ ಚಿತ್ರದ ಒಂದು ಹಾಡಿನಲ್ಲಿ ಹಿಂದಿಯ 31 ಪ್ರಮುಖ ನಟ-ನಟಿಯರು ಬಂದುಹೋಗಿದ್ದರು.
![haripriya](https://etvbharatimages.akamaized.net/etvbharat/prod-images/4835946_haripirya.jpg)
ಕನ್ನಡದಲ್ಲಿ 10ಕ್ಕೂ ಹೆಚ್ಚು ಕಲಾವಿದರನ್ನು ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಉಪೇಂದ್ರ ಹಾಗೂ ರಮ್ಯ ಅಭಿನಯದ ‘ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್’ ಚಿತ್ರದಲ್ಲಿ ಬಳಸಿಕೊಂಡಿದ್ದರು. ಡಾ. ವಿಷ್ಣುವರ್ಧನ್, ರಮೇಶ್ ಅರವಿಂದ್, ಜಗ್ಗೇಶ್, ಆದಿತ್ಯ ಹಾಗೂ ಇನ್ನಿತರರು ಆ ಹಾಡಿನಲ್ಲಿ ಪಾಲ್ಗೊಂಡಿದ್ದರು. ಆದರೆ, ಆ ಸಿನಿಮಾ ದಶಕ ಕಳೆದರೂ ಬಿಡುಗಡೆ ಭಾಗ್ಯ ಕಂಡಿಲ್ಲ. ಇದೀಗ ಕಾಳಿದಾಸ ಚಿತ್ರದಲ್ಲಿ ಈ ಪ್ರಯತ್ನ ನಡೆಯುತ್ತಿದೆ. ಈ ಹಾಡು ಹೇಗೆ ಮೂಡಿಬರಲಿದೆ ಎಂಬುದನ್ನು ಸ್ವಲ್ಪ ದಿನಗಳು ಕಾದು ನೋಡಬೇಕು.
![Ragini dwivedi](https://etvbharatimages.akamaized.net/etvbharat/prod-images/4835946_ragini.jpg)