2019, ಸ್ಯಾಂಡಲ್ವುಡ್ನಲ್ಲಿ ಅತಿ ಹೆಚ್ಚು ಸಿನಿಮಾಗಳು ನಿರ್ಮಾಣ ಆದ ವರ್ಷ ಎಂಬ ಹೆಗ್ಗಳಿಕೆ ಪಡೆದಿದೆ. ಈ ವರ್ಷದ ಹೊಸ್ತಿಲಲ್ಲಿ ಕನ್ನಡ ಚಿತ್ರರಂಗದ ಕೋಟಿ ವಿತರಕ ಎನ್. ಪ್ರಸಾದ್ ಕಿಡ್ನಿ ವೈಫಲ್ಯದಿಂದ ಇಹಲೋಕ ತ್ಯಜಿಸಿದರು. ಸ್ಯಾಂಡಲ್ವುಡ್ನಲ್ಲಿ ಕಡಿಮೆ ಸಮಯದಲ್ಲಿ ಅಣ್ಣಾಬಾಂಡ್, ಗಾಡ್ ಫಾದರ್, ಭೀಮಾ ತೀರದಲ್ಲಿ, ಚಿಂಗಾರಿ, ಚಂದ್ರ ಹೀಗೆ ಹಲವು ದೊಡ್ಡ ಸ್ಟಾರ್ಗಳ ಸಿನಿಮಾಗಳನ್ನು ಕೋಟಿ ಕೋಟಿ ಕೊಟ್ಟು ವಿತರಣೆ ಮಾಡುವ ಮೂಲಕ ರಾತ್ರೋರಾತ್ರಿ ಕೋಟಿ ವಿತರಕ ಅನಿಸಿಕೊಂಡಿದ್ದರು. ಎನ್.ಪ್ರಸಾದ್ ಸಾವು ಚಿತ್ರರಂಗಕ್ಕೆ ಶಾಕಿಂಗ್ ನ್ಯೂಸ್ ಆಗಿತ್ತು. ಕಿಡ್ನಿ ವೈಫಲ್ಯದಿಂದ ಜನವರಿ 6ರಂದು ಎನ್.ಪ್ರಸಾದ್ ನಿಧನರಾದರು.
![Distributer N. prasad](https://etvbharatimages.akamaized.net/etvbharat/prod-images/kn-bng-01-agatha-mathu-achharai-vishayagalu-photos-7204735_19122019170421_1912f_1576755261_316.jpg)
ಪ್ರಸಾದ್ ನಂತರ ಕನ್ನಡ ಹಾಗೂ ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕಿ ಜಯಶ್ರೀದೇವಿ ಕೂಡಾ ಬಾರದ ಲೋಕಕ್ಕೆ ತೆರೆಳಿದರು. ಎಮ್ಮೆ ತಮ್ಮಣ್ಣ, ಕೊಟ್ರೇಶಿ ಕನಸು, ನಾಗಮಂಡಲ, ನಮ್ಮೂರ ಮಂದಾರ ಹೂವೆ, ಅಮೃತ ವರ್ಷಿಣಿ, ಶ್ರೀ ಮಂಜುನಾಥ, ಹಬ್ಬ, ಸ್ನೇಹ ಲೋಕ, ಮುಕುಂದ ಮುರಾರಿ, ಹೀಗೆ ಬಿಗ್ ಬಜೆಟ್ ಹಾಗೂ ದೊಡ್ಡ ಸ್ಟಾರ್ಗಳ ಸಿನಿಮಾ ನಿರ್ಮಾಣ ಮಾಡಿದ ಖ್ಯಾತಿ ಜಯಶ್ರೀ ದೇವಿಗೆ ಸಲ್ಲುತ್ತದೆ. ಆದರೆ ಫೆಬ್ರವರಿ 13ರಂದು ಜಯಶ್ರೀ ದೇವಿಯ ಸಾವಿನ ಸುದ್ದಿ ಕನ್ನಡ ಚಿತ್ರರಂಗಕ್ಕೆ ಅರಗಿಸಿಕೊಳ್ಳಲು ಆಗಲಿಲ್ಲ. ಹೈದರಾಬಾದ್ನ ಅಪೋಲೋ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದ ಜಯಶ್ರೀ ಅವರಿಗೆ 60 ವರ್ಷ ವಯಸ್ಸಾಗಿತ್ತು.
![Producer Jayashree devi](https://etvbharatimages.akamaized.net/etvbharat/prod-images/kn-bng-01-agatha-mathu-achharai-vishayagalu-photos-7204735_19122019170421_1912f_1576755261_1110.jpg)
ಇನ್ನು ರಂಗಕರ್ಮಿ, ಹಿರಿಯ ನಟ ಮಾಸ್ಟರ್ ಹಿರಣ್ಣಯ್ಯ ಕೂಡಾ ಮೇ 2ರಂದು ಅನಾರೋಗ್ಯದಿಂದ ಸಾವನ್ನಪ್ಪಿದರು. ನಾಟಕಗಳಿಂದಲೇ ಭ್ರಷ್ಟಾಚಾರಿಗಳು ಹಾಗೂ ರಾಜಕಾರಣಿಗಳಿಗೆ ಬಿಸಿ ಮುಟ್ಟಿಸುತ್ತಿದ್ದ ಚಾಣಕ್ಯ ಅವರು. ಅನಾರೋಗ್ಯದಿಂದ ಬಳಲುತ್ತಿದ್ದ ಮಾಸ್ಟರ್ ಹಿರಣ್ಣಯ್ಯ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ವಿಧಿವಶರಾದರು.
![Master Hiranaiah](https://etvbharatimages.akamaized.net/etvbharat/prod-images/kn-bng-01-agatha-mathu-achharai-vishayagalu-photos-7204735_19122019170421_1912f_1576755261_824.jpg)
ಮಾಸ್ಟರ್ ಹಿರಣ್ಣಯ್ಯ ನಂತರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಜೂನ್ 10ರಂದು ನಮ್ಮನ್ನೆಲ್ಲಾ ಬಿಟ್ಟು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದರು. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಹೀಗೆ ಬಹುಭಾಷೆ ಸಿನಿಮಾಗಳಲ್ಲಿ ಗಿರೀಶ್ ಕಾರ್ನಾಡ್ ಅಭಿನಯಿಸಿ ಪ್ರೇಕ್ಷಕರಿಗೆ ಮೆಚ್ಚುಗೆಯಾಗಿದ್ದರು. ಬಹು ಅಂಗಾಂಗ ವೈಫಲ್ಯದಿಂದಾಗಿ ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ನಟ, ನಿರ್ದೇಶಕ ಗಿರೀಶ್ ಕಾರ್ನಾಡ್ ನಿಧನ ಸುದ್ದಿ ಕನ್ನಡ ಚಿತ್ರರಂಗ ಅಲ್ಲದೆ ಇಡೀ ದಕ್ಷಿಣ ಸಿನಿಮಾರಂಗಕ್ಕೆ ಆಘಾತ ಉಂಟು ಮಾಡಿತ್ತು.
![Girish karnad](https://etvbharatimages.akamaized.net/etvbharat/prod-images/kn-bng-01-agatha-mathu-achharai-vishayagalu-photos-7204735_19122019170421_1912f_1576755261_947.jpg)
ಕನ್ನಡ ಚಿತ್ರರಂಗದ ಮೊದಲ ವಾಕ್ಚಿತ್ರ, ಭಕ್ತಧ್ರುವ ಸಿನಿಮಾದ ನಟಿ ಎಸ್.ಕೆ. ಪದ್ಮಾದೇವಿ ಕಳೆದ ಸೆಪ್ಟೆಂಬರ್ನಲ್ಲಿ ನಿಧನ ಹೊಂದಿದರು. ಅವರಿಗೆ 95 ವರ್ಷ ವಯಸ್ಸಾಗಿತ್ತು
![S.K. Padmadevi](https://etvbharatimages.akamaized.net/etvbharat/prod-images/kn-bng-01-agatha-mathu-achharai-vishayagalu-photos-7204735_19122019170421_1912f_1576755261_667.jpg)
ಎಸ್.ಕೆ.ಪದ್ಮಾವತಿ ಬಳಿಕ ಕನ್ನಡ ಚಿತ್ರರಂಗ ಮತ್ತೊಬ್ಬ ಹಿರಿಯ ನಟಿ ಎಲ್.ವಿ.ಶಾರದಾ ಅವರನ್ನು ಕಳೆದುಕೊಂಡಿತ್ತು. ವಂಶವೃಕ್ಷ, ಫಣಿಯಮ್ಮ, ಭೂತಯ್ಯನ ಮಗ ಅಯ್ಯು, ವಾತ್ಸಲ್ಯ ಪಥ, ಆದಿ ಶಂಕರಾಚಾರ್ಯ, ಹೀಗೆ ಹಲವಾರು ಸಿನಿಮಾಗಳಲ್ಲಿ ಎಲ್.ವಿ.ಶಾರದಾ ಅಭಿನಯಿಸಿದ್ದಾರೆ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟಿ ಎಲ್.ವಿ.ಶಾರದಾ ಮಾರ್ಚ್ 21ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
![L.V. Sharada](https://etvbharatimages.akamaized.net/etvbharat/prod-images/kn-bng-01-agatha-mathu-achharai-vishayagalu-photos-7204735_19122019170421_1912f_1576755261_311.png)
ಇನ್ನು ಕನ್ನಡ ಚಿತ್ರರಂಗದಲ್ಲಿ ಅಚ್ಚರಿ ವಿಷಯಗಳ ಬಗ್ಗೆ ನೋಡಿದಾಗ, ಕೆಲವೇ ಕೆಲವು ಘಟನೆಗಳು ಕಣ್ಮುಂದೆ ಬರುತ್ತದೆ. ಅದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಇಬ್ಬರೂ ಜೊತೆ ಸೇರಿ ಸುಮಲತಾ ಅಂಬರೀಶ್ ಅವರ ಪರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸಿದ್ದು. ದರ್ಶನ್ ಹಾಗೂ ಯಶ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟರ ಸಿನಿಮಾ ಡೈಲಾಗ್ಗಳ ಮೂಲಕ ಎನ್ಕೌಂಟರ್ ಕೊಡುತ್ತಿದ್ದರೂ, ಈ ಇಬ್ಬರು ನಟರು ಮಾತ್ರ ಜೊತೆ ಸೇರಿ ಅಂಬಿಯ ಋಣ ತೀರಿಸಲು ಒಟ್ಟಿಗೆ ಸೇರಿ ಚುನಾವಣಾ ಪ್ರಚಾರ ಮಾಡಿದರು.
![Darshan and Yash in Mandya Parliament election](https://etvbharatimages.akamaized.net/etvbharat/prod-images/5428023_mandyaelection.jpg)
ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಳಿಯ ಅನಿರುದ್ಧ್, ಸಿನಿಮಾಗಳಲ್ಲಿ ಅಭಿನಯಿಸುವಾಗ ಅಷ್ಟೊಂದು ಸ್ಟಾರ್ ಡಮ್ ಇರಲಿಲ್ಲ. ಆದರೆ 'ಜೊತೆಜೊತೆಯಲಿ' ಧಾರಾವಾಹಿ ಮೂಲಕ ಅವರು ಕಿರುತೆರೆಗೆ ಕಾಲಿಟ್ಟ ನಂತರ ಅವರಿಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಹುಟ್ಟಿಕೊಂಡರು. ಜೊತೆಗೆ ಕಿರುತೆರೆಯ ಸ್ಟಾರ್ ಹೀರೋ ಆದದ್ದು ನಿಜಕ್ಕೂ ಆಶ್ಚರ್ಯದ ವಿಚಾರ ಎನ್ನಬಹುದು.
![Jote joteyali serial](https://etvbharatimages.akamaized.net/etvbharat/prod-images/5428023_jote.jpg)
ಇನ್ನು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್ ವಾರ್ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಆದರೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಪುತ್ರಿ ಐರಾ ಹುಟ್ಟುಹಬ್ಬಕ್ಕೆ ಇಡೀ ಕನ್ನಡ ಚಿತ್ರರಂಗ ಬಂದು ನಾವೆಲ್ಲರೂ ಒಂದೇ ಅಂತಾ ಸಂದೇಶ ನೀಡಿದ್ದು ಎಲ್ಲರಿಗೂ ಖುಷಿಯ ವಿಚಾರ. ಕನ್ನಡದ ಚಿಕ್ಕ ನಟನಿಂದ ಹಿಡಿದು ದೊಡ್ಡ ಸ್ಟಾರ್ವರೆಗೂ ಯಶ್ ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು.
![Rocking star Yash daughter birthday](https://etvbharatimages.akamaized.net/etvbharat/prod-images/5428023_538_5428023_1576823279852.png)