ಯೋಗರಾಜ್ ಭಟ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್ನ ಮುಂಗಾರು ಮಳೆ ಚಿತ್ರ ಬಿಡುಗಡೆಯಾಗಿ ಇಂದಿಗೆ ಬರೋಬ್ಬರಿ 14 ವರ್ಷಗಳು ಕಳೆದಿವೆ. ಈ ಸಂಭ್ರಮವನ್ನು ಗಣೇಶ್ ಮತ್ತು ಯೋಗರಾಜ್ ಭಟ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ತಲೈವಾಗೆ ‘ದೇವರ ಎಚ್ಚರಿಕೆಯ ಕರೆ’! ಸದ್ಯಕ್ಕೆ ಪಕ್ಷ ಸ್ಥಾಪನೆ ಮಾಡದಿರಲು ರಜನಿಕಾಂತ್ ನಿರ್ಧಾರ
ಅಂದಿಗೂ ಎಂದಿಗೂ ಈ ಚಿತ್ರ ಪ್ರೇಮಿಗಳಿಗೆ ಸಖತ್ ಖುಷಿ ನೀಡುತ್ತಿದೆ. ಈ ಸಿನಿಮಾದ ಹಾಡುಗಳು ಯಾವತ್ತೂ ಅಜರಾಮರವಾಗಿ ಕೇಳುಗರ ಹೃದಯದಲ್ಲಿ ಉಳಿದಿವೆ. ಅದ್ಭುತವಾದ ಸಾಹಿತ್ಯ, ಸುಮಧುರ ಹಾಡುಗಳು, ಒಳ್ಳೆಯ ಸಿನಿಮಾ ಕಥೆ, ಬೇಸರ ಆಗದ ರೀತಿ ಇರುವ ಸಂಭಾಷಣೆಗಳು ಕನ್ನಡಿಗರ ಹೃದಯ ಗೆದ್ದಿವೆ.
ಇನ್ನು ಈ ಚಿತ್ರದ ಬಗ್ಗೆ ಯೋಗರಾಜ್ ಭಟ್ ಕೆಲವು ಸಾಲುಗಳನ್ನು ಬರೆದಿದ್ದಾರೆ. ''ನಮಸ್ತೆ....., ನಾವಿಬ್ಬರೂ, ಜೊತೆಗೆ ಇಡೀ ತಂಡ ಆಗ ತಾನೇ ಕಣ್ತೆರೆದ ಶಿಶುಗಳಂತೆ 'ಮುಂಗಾರು ಮಳೆ' ಚಿತ್ರ ಮಾಡಿ, ಜನತೆಗೆ ಅರ್ಪಿಸಿ ಇಂದಿಗೆ 14 ವರ್ಷಗಳಾಗಿವೆ.... ಚಿತ್ರಕ್ಕಷ್ಟೇ ಅಲ್ಲದೇ ನಮ್ಮಿಬ್ಬರಿಗೂ ಇದು ಒಂದು ರೀತಿಯ ಹುಟ್ಟುಹಬ್ಬ... ಕೆಲಸ ಕಲಿಸಿದ, ಬದುಕು ಕೊಟ್ಟ, ಪ್ರೀತಿ ತಿಳಿಸಿದ, ನಾಡು ನಲಿಸಿದ ಈ ಪ್ರೇಕ್ಷಕರ ಆಸ್ತಿಯಂತಹ ಮಹಾನ್ ಚಿತ್ರಕ್ಕೆ ನಮ್ಮಿಬ್ಬರ ದೀರ್ಘದಂಡ ನಮನಗಳು.... ಜೈ ಮುಂಗಾರು ಮಳೆ....ಜೈ ಜನತೆ....ಜೈ ಜೀವನ...ನಿಮ್ಮವರು - ಗಣಪ-ಯೋಗ್ರಾಜ್ ಭಟ್'' ಎಂದು ಬರೆದುಕೊಂಡಿದ್ದಾರೆ.