12ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಫೆಬ್ರವರಿ 26ರಂದು ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. 8 ದಿನಗಳ ಕಾಲ ನಡೆಯುವ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಬುಧವಾರ ಸಂಜೆ 4 ನಾಲ್ಕು ಗಂಟೆಗೆ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.
ಈ ಕಾರ್ಯಕ್ರಮ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್, ಬಹುಭಾಷಾ ನಟಿ ಜಯಪ್ರದಾ, ಬಾಲಿವುಡ್ ಹೆಸರಾಂತ ನಿರ್ಮಾಪಕ ಬೋನಿ ಕಪೂರ್ ಹಾಗೂ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಸಿನಿಮೋತ್ಸವದಲ್ಲಿ ಉದ್ಘಾಟನಾ ಸಿನಿಮಾವಾಗಿ ಇರಾನಿ ಚಲನಚಿತ್ರ ನಿರ್ದೇಶಕ ಶಾಹಿದ್ ಅಹಮಡೇಲು ನಿರ್ದೇಶನದ 'ಸಿನಿಮಾ ಖಾರ್' ಚಿತ್ರ ಪ್ರದರ್ಶನವಾಗಲಿದೆ ಎಂದು ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಹೇಳಿದರು.
ಫಿಲಂ ಫೆಸ್ಟಿವಲ್ನಲ್ಲಿ ಬರ್ಲಿನ್, ಕಾನ್, ವೆನಿಸ್, ಟೊರಂಟೋ, ಗೋವಾ, ಮುಂಬೈ ಮತ್ತು ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.
ಇದರ ಜೊತೆಗೆ ಸುಮಾರು ಅರವತ್ತು ದೇಶಗಳ 225ಕ್ಕೂ ಹೆಚ್ಚಿನ ಚಿತ್ರಗಳು ಪ್ರದರ್ಶನವಾಗಲಿವೆ. ಸಿನಿಮೋತ್ಸವದ ಚಿತ್ರಗಳು ಈ ಬಾರಿ ಒರಾಯನ್ ಮಾಲ್, ನವರಂಗ್ ಚಿತ್ರಮಂದಿರ, ಕಲಾವಿದರ ಸಂಘ, ಸುಚಿತ್ರ ಫಿಲಂ ಸೊಸೈಟಿಯಲ್ಲಿ ಪ್ರದರ್ಶನವಾಗಲಿವೆ.
ಈ ಫಿಲಂ ಫೆಸ್ಟಿವಲ್ಗೆ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ರಾಜಸ್ಥಾನ, ದೆಹಲಿ, ತೆಲಂಗಾಣ, ಕೇರಳ ಹಾಗೂ ತಮಿಳುನಾಡಿನಿಂದ ಚಲನಚಿತ್ರ ನಿರ್ಮಾಪಕರು, ಚಲನಚಿತ್ರ ಉತ್ಸವ ಸಂಘಟಕರು, ಸಿನಿಮಾ ಪತ್ರಕರ್ತರು, ಚಲನಚಿತ್ರ ವಿಮರ್ಶಕರು ಆಗಮಿಸಲಿದ್ದಾರೆ.