ಸಿನಿಮಾ ಸೆಲಬ್ರಿಟಿಗಳ ಹುಟ್ಟುಹಬ್ಬಕ್ಕೆ ಅವರ ಹೊಸ ಸಿನಿಮಾ ಘೋಷಣೆಯಾಗಲಿ, ಟೀಸರ್, ಟ್ರೇಲರ್ ಬಿಡುಗಡೆಯಾಗಲಿ ಅಥವಾ ಹೊಸ ಸಿನಿಮಾ ಹಾಡುಗಳನ್ನು ಬಿಡುಗಡೆ ಮಾಡುವುದು ಸಹಜ. ಇದೀಗ ರಮೇಶ್ ಅರವಿಂದ್ ಹುಟ್ಟುಹಬ್ಬಕ್ಕೆ ಕೂಡಾ '100' ಸಿನಿಮಾದ ಹಾಡೊಂದನ್ನು ಬಿಡುಗಡೆ ಮಾಡಲಾಗುತ್ತಿದೆ.
ಸೆಪ್ಟೆಂಬರ್ 10 ರಂದು ರಮೇಶ್ ಅರವಿಂದ್ ಹುಟ್ಟುಹಬ್ಬ. ಸರಳ ಸ್ವಭಾವದ ರಮೇಶ್ ಅರವಿಂದ್ ನಟ, ನಿರ್ದೇಶಕ, ನಿರೂಪಕರಾಗಿ ಕೂಡಾ ಹೆಸರು ಮಾಡಿದವರು. ಇಂಜಿನಿಯರಿಂಗ್ ಮುಗಿಸಿ 'ಐ ಲೈಕ್ ಸೌಂಡ್ ಆಫ್ ಕ್ಲಾಪ್, ನಾಟ್ ಮೆಷಿನ್ಸ್' ಎಂದು ಇಂಜಿನಿಯರಿಂಗ್ ವೃತ್ತಿಗೆ ಹೋಗದೆ ಚಿತ್ರರಂಗಕ್ಕೆ ಬಂದವರು. ತಮ್ಮ ಆಪ್ತ ಸ್ನೇಹಿತ, ತಮಿಳಿನ ಖ್ಯಾತ ನಟ ಕಮಲ್ ಹಾಸನ್ ಅವರನ್ನು ನಾಯಕನನ್ನಾಗಿಸಿ 'ಉತ್ತಮ ವಿಲನ್'ನಂತ ಚಿತ್ರವನ್ನು ನಿರ್ದೇಶಿಸಿದವರು ರಮೇಶ್ ಅರವಿಂದ್. ನಾಳೆ ರಮೇಶ್ ಅರವಿಂದ್ 56ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ಬಾರಿ ಅವರು ಕುಟುಂದೊಂದಿಗೆ ಬಹಳ ಸಿಂಪಲ್ ಆಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ರಮೇಶ್ ಅರವಿಂದ್ 56ನೇ ಹುಟ್ಟುಹಬ್ಬದ ವಿಶೇಷವಾಗಿ ಅವರೇ ನಿರ್ದೇಶಿಸಿ ಅಭಿನಯಿಸುತ್ತಿರುವ '100' ಚಿತ್ರದ ಹಾಡೊಂದು ಬಿಡುಗಡೆಯಾಗುತ್ತಿದೆ. ದಿ ಬೀಟ್ಸ್ ಆಡಿಯೋ ಸಂಸ್ಥೆ ಈ ಪಾರ್ಟಿ ಹಾಡನ್ನು ಹೊರತರುತ್ತಿದೆ. ಚಿತ್ರದಲ್ಲಿ ರಮೇಶ್ ಅರವಿಂದ್, ಪೂರ್ಣ, ರಚಿತಾ ರಾಮ್, ಅಮಿತ ರಂಗನಾಥ್, ಶಿಲ್ಪಾ ಶೆಟ್ಟಿ, ಸುಕನ್ಯ ಗಿರೀಶ್, ಲಕ್ಷ್ಮಿ ಹಾಗೂ ಇನ್ನಿತರರು ನಟಿಸಿದ್ದಾರೆ.
ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಎಂ. ರಮೇಶ್ ರೆಡ್ಡಿ '100' ಚಿತ್ರವನ್ನು ನಿರ್ಮಿಸುತ್ತಿದ್ದು ಇದು ತಮಿಳಿನ 'ತಿರುಟ್ಟು ಪಯಲೆ' ಚಿತ್ರದ ಸ್ಪೂರ್ತಿಯಿಂದ ತಯಾರಾಗುತ್ತಿರುವ ಚಿತ್ರ. ರಮೇಶ್ ರೆಡ್ಡಿ ಈ ಹಿಂದೆ ಉಪ್ಪು ಹುಳಿ ಖಾರ, ಪಡ್ಡೆ ಹುಲಿ ಸಿನಿಮಾಗಳನ್ನು ನಿರ್ಮಾಣ ಮಾಡಿದವರು. ಆಕಾಶ್ ಶ್ರೀವತ್ಸ ಈ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ. ರವಿ ಬಸ್ರೂರ್ ಸಂಗೀತ ಒದಗಿಸಿದ್ದಾರೆ.