ನವದೆಹಲಿ : ದೇಶದ ಸ್ವಾತಂತ್ರ್ಯದ ಬಗ್ಗೆ ವಿವಾದಾತ್ಮಕ ಹೇಳಿಕೆ (controversial remarks) ನೀಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಪದ್ಮಶ್ರೀ ಪ್ರಶಸ್ತಿಗೆ ಅರ್ಹರಲ್ಲ. ಕೇಂದ್ರ ಸರ್ಕಾರವು ಅವರಿಗೆ ನೀಡಲಾಗಿರುವ ಪದ್ಮಶ್ರೀ (Padma Shri ) ಪ್ರಶಸ್ತಿಯನ್ನು ತಕ್ಷಣ ಹಿಂಪಡೆಯಬೇಕು ಎಂದು ಮಹಾರಾಷ್ಟ್ರ ಸಚಿವ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ನಾಯಕ ನವಾಬ್ ಮಲಿಕ್ (Nawab Malik) ಒತ್ತಾಯಿಸಿದ್ದಾರೆ.
ಇಂದು ಈ ಬಗ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2014ರಲ್ಲಿ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತು ಎಂದು ಹೇಳುವ ಮೂಲಕ ನಟಿ ರಣಾವತ್ ಸ್ವಾತಂತ್ರ್ಯ ಹೋರಾಟಗಾರರನ್ನು ಪರೋಕ್ಷವಾಗಿ ಅವಮಾನಿಸಿದ್ದಾರೆ. ಅವರ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ.
ಕೇಂದ್ರ ಸರ್ಕಾವವು ಕಂಗನಾ ಅವರಿಂದ ಪದ್ಮಶ್ರೀಯನ್ನು ಹಿಂಪಡೆಯಬೇಕು. ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ತಕ್ಷಣ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಪರೋಕ್ಷವಾಗಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವನ್ನು ಹೊಗಳಿದ್ದು ಈ ಬಗ್ಗೆ ಹಲವರು ನಟಿಯ ಹೇಳಿಕೆಯನ್ನು ಖಂಡಿಸಿದ್ದಾರೆ. ಇದಕ್ಕೂ ಮುನ್ನ ಗುರುವಾರ ಬಿಜೆಪಿ ನಾಯಕ ವರುಣ್ ಗಾಂಧಿ (BJP leader Varun Gandhi) ಕೂಡ ಟ್ವೀಟ್ ಮೂಲಕ ನಟಿಯ ಹೇಳಿಕೆಗೆ ಕೆಂಡ ಕಾರಿದ್ದರು.
ಇತ್ತೀಚೆಗೆ ನಟಿ ಕಂಗನಾ ರಣಾವತ್ಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಪ್ರಶಸ್ತಿ ಸ್ವೀಕರಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿ ನಟಿಯು ಟ್ವೀಟ್ ಮಾಡಿದ್ದರು.