ಮುಂಬೈ: ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಜೀವನ ಆಧಾರಿತ 'ತಲೈವಿ' ಸಿನಿಮಾದ ಟ್ರೇಲರ್ ನಿನ್ನೆ ಬಿಡುಗಡೆಯಾಗಿದ್ದು, ಟ್ರೇಲರ್ ಬಿಡುಗಡೆ ವೇಳೆ ಕಂಗನಾ ರಣಾವತ್ ತಾವು ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಕುರಿತಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸಿನಿಮಾದ ಟ್ರೇಲರ್ ಬಿಡುಗಡೆ ವೇಳೆ ನೀವು ರಾಜಕೀಯಕ್ಕೆ ಸೇರುತ್ತೀರಾ ಎಂಬ ಸುದ್ದಿಗಾರರ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ರಾಜಕೀಯದ ಕುರಿತು ಸಾಕಷ್ಟು ಮಾಹಿತಿ ತಿಳಿದಿಲ್ಲ. ದೇಶ, ರೈತರಿಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಮಾತನಾಡಿದ್ದಕ್ಕೆ, ನಾನು ರಾಜಕಾರಣಿಯಾಗಲು ಬಯಸುತ್ತೇನೆ ಅಂತಾ ತಪ್ಪು ಮಾಹಿತಿ ಹರಡಲು ಪ್ರಯತ್ನಿಸಲಾಗುತ್ತಿದೆ. ನಾನು ಈ ದೇಶದ ನಾಗರಿಕಳಾಗಿ ಎಲ್ಲದಕ್ಕೂ ಪ್ರತಿಕ್ರಿಯಿಸುತ್ತೇನೆ. ನನಗೆ ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು 'ತಲೈವಿ' ಸಿನಿಮಾ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಇದೇ ಏಪ್ರಿಲ್ 23 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ತಲೈವಿಯನ್ನು ಎ.ಎಲ್. ವಿಜಯ್ ನಿರ್ದೇಶಿಸಿದ್ದು, ಇದರಲ್ಲಿ ಅರವಿಂದ ಸ್ವಾಮಿ, ಪ್ರಕಾಶ್ ರಾಜ್, ಮಾಧು ಮತ್ತು ಭಾಗ್ಯಶ್ರೀ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಕಂಗನಾ ರಣಾವತ್ ಅವರು 2019 ನೇ ಸಾಲಿನ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇದುವರೆಗೂ ಅವರು 3 ಬಾರಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದು, ಇದು ನಾಲ್ಕನೇ ಪ್ರಶಸ್ತಿಯಾಗಿದೆ.