ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ದಿನೇ ದಿನೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಾಗಿನಿಂದ ಪೊಲೀಸರು ಆತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎಲ್ಲರನ್ನೂ ವಿಚಾರಣೆ ನಡೆಸುತ್ತಿದ್ದಾರೆ.
ಸುಶಾಂತ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಕೇಂದ್ರ ಗೃಹಮಂತ್ರಿ ಅಮಿತ್ ಷಾ ಅವರಿಗೆ ಟ್ವೀಟ್ ಮಾಡಿದ್ದರು. ಆದರೆ ಇದೀಗ ಈ ಪ್ರಕರಣದಲ್ಲಿ ಎಲ್ಲರೂ ರಿಯಾ ಚಕ್ರವರ್ತಿ ಮೇಲೆ ಅನುಮಾನ ಪಡುವಂತಾಗಿದೆ. ಸುಶಾಂತ್ ಸಾವನ್ನಪ್ಪುವ ಕೆಲವು ದಿನಗಳ ಹಿಂದೆ ನಾವಿಬ್ಬರೂ ಜಗಳವಾಡಿದ್ದೆವು ಎಂದು ರಿಯಾ ಪೊಲೀಸರ ಬಳಿ ಹೇಳಿಕೆ ನೀಡಿದ್ದರು. ಇದೀಗ ಸುಶಾಂತ್ ಸಹೋದರಿ ಮೀತು ಸಿಂಗ್ ಕೂಡಾ ಸುಶಾಂತ್ ಸಾಯುವ ಕೆಲವೇ ಗಂಟೆಗಳ ಹಿಂದೆ ಕೂಡಾ ರಿಯಾ ಆತನೊಂದಿಗೆ ಜಗಳವಾಡಿದ್ದಳು. ಇದರಿಂದ ಸುಶಾಂತ್ ಮನಸ್ಸಿಗೆ ಘಾಸಿಯುಂಟಾಗಿದೆ ಎಂದು ಬಿಹಾರ ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ.
ರಿಯಾ ಚಕ್ರವರ್ತಿ ಸುಶಾಂತ್ ಅವರನ್ನು ಬಹಳ ಹಿಂಸಿಸುತ್ತಿದ್ದಳು ಎಂದು ಇತ್ತೀಚೆಗೆ ಸುಶಾಂತ್ ಮಾಜಿ ಪ್ರೇಯಸಿ ಅಂಕಿತಾ ಲೋಕಂಡೆ ಕೂಡಾ ವಿಚಾರಣೆ ವೇಳೆ ಬಿಹಾರ ಪೊಲೀಸರ ಬಳಿ ತಿಳಿಸಿದ್ದರು. ಆತ್ಮಹತ್ಯೆ ಪ್ರಚೋದನೆ ಆರೋಪದ ಮೇರೆಗೆ ಸುಶಾಂತ್ ತಂದೆ ಕೆ.ಕೆ. ಸಿಂಗ್ ಅವರು ರಿಯಾ ಚಕ್ರವರ್ತಿ, ರಿಯಾ ತಂದೆ, ತಾಯಿ, ಸಹೋದರ ಸೇರಿ 6 ಮಂದಿ ಮೇಲೆ ದೂರು ನೀಡಿದ್ದರು. ಇವರ ಮೇಲೆ ಎಫ್ಐಆರ್ ದಾಖಲಾಗುತ್ತಿದ್ದಂತೆ ರಿಯಾ ಚಕ್ರವರ್ತಿ ಕಾಣೆಯಾಗಿದ್ದಾರೆ ಎನ್ನಲಾಗುತ್ತಿದೆ.
ಸುಶಾಂತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ಕೂಡಾ ಮುಂಬೈಗೆ ಬಂದು ಸಂಬಂಧಪಟ್ಟವನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಪೊಲೀಸರು ಸುಶಾಂತ್ ಸಹೋದರಿ ಮೀತು ಸಿಂಗ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಸುಶಾಂತ್ ಮತ್ತೋರ್ವ ಸಹೋದರಿ ಶ್ವೇತಾ ಸಿಂಗ್, ಸಹೋದರ ಸುಶಾಂತ್ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡಿದ್ದಾರೆ.