ಮುಂಬೈ: ನಟಿ ರಿಯಾ ಚಕ್ರವರ್ತಿ ಹಾಗೂ ಅವರ ಸಹೋದರ ಶೋವಿಕ್ ಚಕ್ರವರ್ತಿ ಸೇರಿದಂತೆ ಆರು ಆರೋಪಿಗಳ ಜಾಮೀನು ಅರ್ಜಿಯನ್ನು ಮುಂಬೈ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಸಂಬಂಧ ಡ್ರಗ್ಸ್ ಮಾಫಿಯಾ ನಂಟಿನ ಆರೋಪದಡಿ ರಿಯಾ ಚಕ್ರವರ್ತಿ ಹಾಗೂ ಶೋವಿಕ್ ಚಕ್ರವರ್ತಿಯನ್ನು ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್ಸಿಬಿ) ಬಂಧಿಸಿತ್ತು. ರಿಯಾ ಹಾಗೂ ಶೋವಿಕ್ ಪರವಾಗಿ ರಿಯಾ ಚಕ್ರವರ್ತಿ ಪರ ವಕೀಲ ಸತೀಶ್ ಮಾನೆಶಿಂಧೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಪ್ರಕರಣದಲ್ಲಿ ಬಂಧಿತರಾಗಿದ್ದ ದೀಪೇಶ್ ಸಾವಂತ್, ಸ್ಯಾಮ್ಯುಯೆಲ್ ಮಿರಾಂಡಾ, ಜೈದ್ ವಿಲಾತ್ರಾ ಮತ್ತು ಬಶಿತ್ ಪರಿಹಾರ್ ಕೂಡ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ನಿನ್ನೆ ಈ ಅರ್ಜಿಗಳ ವಿಚಾರಣೆ ನಡೆಸಿದ್ದ ಮುಂಬೈ ಸ್ಪೆಷಲ್ ಕೋರ್ಟ್, ಆದೇಶವನ್ನು ಕಾಯ್ದಿರಿಸಿ ಇಂದಿಗೆ ವಿಚಾರಣೆಯನ್ನು ಮುಂದೂಡಿತ್ತು. ಇಂದು ಮತ್ತೆ ವಿಚಾರಣೆ ನಡೆಸಿರುವ ನ್ಯಾಯಾಲಯ ಆರು ಆರೋಪಿಗಳ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. ಹೀಗಾಗಿ ಸೆ.22ರ ವರೆಗೆ ರಿಯಾ ನ್ಯಾಯಾಂಗ ಬಂಧನ ಮುಂದುವರೆಯಲಿದ್ದು, ಶೋವಿಕ್ ಎನ್ಸಿಬಿ ಕಸ್ಟಡಿಯಲ್ಲಿರಲಿದ್ದಾರೆ.
ಆರೋಪಿಗಳು ಮುಂಬೈ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸೋಮವಾರ ಬಾಂಬೆ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಿದ್ದಾರೆ.