ಮುಂಬೈ : ಲಾಕ್ಡೌನ್ ಸಮಯದಲ್ಲಿ ಸೋನು ಸೂದ್ ಇದುವರೆಗೆ ಸಾವಿರಾರು ವಲಸೆ ಕಾರ್ಮಿಕರನ್ನು ತಮ್ಮ ಮನೆಗಳಿಗೆ ಕಳುಹಿಸಿದ್ದಾರೆ. ವಲಸೆ ಕಾರ್ಮಿಕರ ಸಮಸ್ಯೆ ಸ್ವಲ್ಪ ಮಟ್ಟಿಗೆ ಪರಿಹರಿಸಲು ಆಡಳಿತಕ್ಕೆ ಸಹಾಯ ಮಾಡಿದ್ದಾರೆ. ತಮ್ಮ ಕಾರ್ಯವನ್ನು ಮುಂದುವರೆಸಿರುವ ಅವರು, ಶುಕ್ರವಾರ ಸಂಜೆ ಮುಂಬೈನ ವಡಾಲಾದಲ್ಲಿ 220 ಜನರಿಗೆ ಬಸ್ ವ್ಯವಸ್ಥೆ ಮಾಡಿದ್ದಾರೆ.
ಎರಡು ಬಸ್‌ಗಳು ಉತ್ತರಾಖಂಡಕ್ಕೆ, ಒಂದು ಬಸ್ ತಮಿಳುನಾಡಿಗೆ ಮತ್ತು ಮೂರು ಬಸ್‌ಗಳು ಉತ್ತರಪ್ರದೇಶಕ್ಕೆ ತೆರಳಿವೆ. ಸೋನು ಸೂದ್ ಈ ಹಿಂದೆ ವಲಸೆ ಕಾರ್ಮಿಕರನ್ನು ಮುಂಬೈಯಿಂದ ಉತ್ತರಪ್ರದೇಶಕ್ಕೆ ಬಸ್ ಮೂಲಕ ಸುರಕ್ಷಿತವಾಗಿ ಸಾಗಿಸಿದ್ದರು. ಈಗ ಮತ್ತೆ 220 ಜನರನ್ನು ಮನೆಗೆ ಹಿಂದಿರುಗಿಸುವ ಜವಾಬ್ದಾರಿ ನಿರ್ವಹಿಸಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡ ಸಾವಿರಾರು ವಲಸೆ ಕಾರ್ಮಿಕರು ತಮ್ಮ ಊರುಗಳನ್ನು ತಲುಪಲು ಸಮಸ್ಯೆ ಎದುರಿಸಿದರು. ಅಂತಹ ಪರಿಸ್ಥಿತಿಯಲ್ಲಿ ಸೋನು ಸೂದ್ ಅವರ ಸಹಾಯದಿಂದ ಸಾವಿರಾರು ಕಾರ್ಮಿಕರು ಸುರಕ್ಷಿತವಾಗಿ ಮನೆಗೆ ತಲುಪಿದ್ದಾರೆ. ಪ್ರಯಾಣದ ಸಮಯದಲ್ಲಿ ಅವರ ಆಹಾರಕ್ಕೂ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿತ್ತು.
ಸೋನು ಅವರ ಈ ಕಾರ್ಯ ಬೆಳಕಿಗೆ ಬಂದಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅನೇಕರು ಚಲನಚಿತ್ರ ನಟರು, ರಾಜಕಾರಣಿಗಳು ಸೋನು ಸೂದ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ವಲಸೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿರುವುದು ತಿಳಿದ ಮೇಲೆ ವಿವಿಧ ಮೂಲೆಗಳಲ್ಲಿ ಸಿಲುಕಿರುವ ಜನರು ಟ್ವೀಟ್ ಮೂಲಕ ತಮ್ಮ ಊರುಗಳಿಗೆ ತಲುಪಿಸುವಂತೆ ಸೋನು ಅವರಿಗೆ ಮನವಿ ಮಾಡುತ್ತಿದ್ದಾರೆ.