ಮುಂಬೈ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗ್ಲಾಮರ್ ಜೊತೆಗೆ ಸಾಕಷ್ಟು ಅಭಿಮಾನಿ ಬಳಗವನ್ನು ಗಳಿಸಿರುವ ತಾರೆ ಸಾರಾ ಅಲಿ ಖಾನ್. ಈಕೆ ಬಾಲಿವುಡ್ ತಾರೆಯರಾದ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ಪುತ್ರಿ ಎಂಬ ಖ್ಯಾತಿ ಹೊತ್ತು ಜನಿಸಿದ್ದರೂ ತನಗೆ ಸ್ಟಾರ್ಡಮ್ ನಲ್ಲಿ ನಂಬಿಕೆಯಿಲ್ಲ ಎಂದು ಹೇಳಿಕೊಂಡಿದ್ದಾರೆ.
"ನಾನು ಸ್ಟಾರ್ಡಮ್ ನೋಡುವುದಿಲ್ಲ. ಇಲ್ಲಿಯವರೆಗೆ ನಾನು ಅಭಿಮಾನಿಗಳು, ಸ್ಟಾರ್ ಎಂಬ ಪದವನ್ನೂ ಬಳಸಿಲ್ಲ. ನನಗೆ ಈ ವಿಷಯಗಳಲ್ಲಿ ನಂಬಿಕೆಯೂ ಇಲ್ಲ. ಪ್ರತೀ ಚಿತ್ರದ ಬಿಡುಗಡೆಯೊಂದಿಗೆ ನಿಲುವು, ಸ್ಟಾರ್ಡಮ್ ಎಲ್ಲವೂ ಬದಲಾಗುತ್ತಲೇ ಇರುತ್ತದೆ." ಎಂದು ಸಾರಾ ಹೇಳಿದರು.
"ನಿಮ್ಮ 'ನೀಯತ್' (ಉದ್ದೇಶ) ಮಾತ್ರ ಮುಖ್ಯವಾದುದು ಎಂದು ನಾನು ಭಾವಿಸುತ್ತೇನೆ. ಆಪ್ ಕಿ ಜೋ 'ನೀಯತ್' ಹೋತಿ ಹೈ ವೊ ಮ್ಯಾಟರ್ ಕರ್ತಾ ಹೈ, ಔರ್ ಕಹಿನ್ ನಾ ಕಹಿನ್ ಜೋ ಆಪ್ ಕಿ ಶಿದ್ದತ್, ಪ್ಯಾಶನ್ ಔರ್ ಜುನೂನ್ ಹೋತಾ ಹೈ ವೊ ಮ್ಯಾಟರ್ ಕರ್ತಾ ಹೈ. ಉದ್ದೇಶ, ಕಠಿಣ ಪರಿಶ್ರಮ, ಉತ್ಸಾಹ ಮತ್ತು ಕ್ರೇಜ್ ಮುಖ್ಯವೇ ಹೊರತು ಉಳಿದಂತೆ ಎಲ್ಲವೂ ಬದಲಾಗುತ್ತಲೇ ಇರುತ್ತದೆ." ಎಂದು ಅವರು ಹೇಳಿದರು.
ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ ನಟಿಸಿರುವ ಅಭಿಷೇಕ್ ಕಪೂರ್ ಅವರ "ಕೇದಾರನಾಥ್" ಚಿತ್ರದ ಮೂಲಕ ಸಾರಾ 2018 ರಲ್ಲಿ ಬಾಲಿವುಡ್ ಪ್ರವೇಶಿಸಿದರು. ನಂತರ ರೋಹಿತ್ ಶೆಟ್ಟಿಯವರ "ಸಿಂಬಾ" ಚಿತ್ರದಲ್ಲಿ ರಣವೀರ್ ಸಿಂಗ್ ಅವರೊಂದಿಗೆ, ಇಮ್ತಿಯಾಜ್ ಅಲಿಯವರ "ಲವ್ ಆಜ್ಕಲ್ 2" ನಲ್ಲಿ ಕಾರ್ತಿಕ್ ಆರ್ಯನ್ ಜೊತೆಗೆ ಮತ್ತು ಇತ್ತೀಚೆಗೆ ಬಿಡುಗಡೆಯಾದ ಡೇವಿಡ್ ಧವನ್ ಅವರ "ಕೂಲಿ ನಂ 1" ನಲ್ಲಿ ವರುಣ್ ಧವನ್ ಜೊತೆ ಕಾಣಿಸಿಕೊಂಡಿದ್ದಾರೆ.