ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಳಿಕ ಬಾಲಿವುಡ್ನಲ್ಲಿ ಸ್ವಜನಪಕ್ಷಪಾತದ ಬಗ್ಗೆ ತೀವ್ರ ಚರ್ಚೆಯಾಗುತ್ತಿದೆ. ಈ ಕಾರಣಕ್ಕಾಗಿ ಆಲಿಯಾ ಭಟ್, ಕರಣ್ ಜೋಹರ್, ಸೋನಂ ಕಪೂರ್ ಸೇರಿದಂತೆ ಇನ್ನಿತರ ಸ್ಟಾರ್ ಮಕ್ಕಳ ಹೆಸರುಗಳು ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಕೇಳಿಬರುತ್ತಿದೆ.
ಆದರೆ ಸ್ವಜನಪಕ್ಷಪಾತದ ಬಗ್ಗೆ ಪ್ರತಿಕ್ರಿಯಿಸಿರುವ ಕರೀನಾ ಕಪೂರ್, ನೆಪೋಟಿಸಮ್ ಬಗ್ಗೆ ಚರ್ಚೆ ಬಹಳ ವಿಚಿತ್ರ ಎನ್ನಿಸುತ್ತಿದೆ. ಏಕೆಂದರೆ ನಮಗೆ ಸ್ಟಾರ್ ಪಟ್ಟ ಕೊಡುವುದು, ಬಿಡುವುದು ಎಲ್ಲಾ ಸಿನಿಪ್ರಿಯರಿಗೆ ಸೇರಿದ ವಿಚಾರ. ಬಾಲಿವುಡ್ನಲ್ಲಿ ಬಹಳಷ್ಟು ಸ್ಟಾರ್ ಮಕ್ಕಳಿಗೆ ಇದುವರೆಗೂ ಸಕ್ಸಸ್ ದೊರೆತಿಲ್ಲ. ಅಂತ ನಟರ ದೊಡ್ಡ ಪಟ್ಟಿಯನ್ನು ನಾನು ನೀಡಲು ಸಿದ್ಧಳಿದ್ದೇನೆ ಎಂದು ಹೇಳಿದ್ದಾರೆ.
ಬಬಿತಾ ಹಾಗೂ ರಣಧೀರ್ ಕಪೂರ್ ಪುತ್ರಿ ಕರೀನಾ ಕಪೂರ್ ತನ್ನ ಅಕ್ಕ ಕರೀಷ್ಮಾ ಕಪೂರ್ ಬಾಲಿವುಡ್ನಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವಾಗಲೇ ಚಿತ್ರರಂಗಕ್ಕೆ ಕಾಲಿಟ್ಟರು. 'ನೆಪೋಟಿಸಮ್ ಪದ ಕೇಳಲು ಬಹಳ ವಿಲಕ್ಷಣ ಎನ್ನಿಸುತ್ತದೆ. ನನ್ನ ಕುಟುಂಬಕ್ಕೆ ಸಿನಿಮಾ ಹಿನ್ನೆಲೆ ಇದ್ದರೂ, ನನ್ನ ಅಕ್ಕ ಸ್ಟಾರ್ ನಟಿಯಾಗಿದ್ದರೂ ನಾನೂ ಕೂಡಾ ಚಿತ್ರರಂಗದಲ್ಲಿ ನೆಲೆಯೂರಲು ಬಹಳ ಕಷ್ಟಪಟ್ಟೆ. ಅದೇ ರೀತಿ ಜೇಬಿನಲ್ಲಿ ಕೇವಲ 10 ರೂಪಾಯಿ ಇರಿಸಿಕೊಂಡು ಟ್ರೈನಿನಲ್ಲಿ ಮುಂಬೈಗೆ ಬಂದು ಬಾಲಿವುಡ್ನಲ್ಲಿ ಸಕ್ಸಸ್ ಕಂಡ ಸಾಕಷ್ಟು ಮಂದಿಯಿದ್ದಾರೆ'.
ನಾವು ಎಷ್ಟೇ ಪ್ರಯತ್ನ ಪಟ್ಟರೂ ಯಾರನ್ನು ಸ್ಟಾರ್ ಸ್ಥಾನದಲ್ಲಿ ಕೂರಿಸಬೇಕು ಎಂದು ನಿರ್ಧರಿಸುವುದು ಜನರ ಕೈಯ್ಯಲ್ಲಿದೆ. ಬಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಅಕ್ಷಯ್ ಕುಮಾರ್, ಶಾರುಖ್ ಖಾನ್ ಅವರಿಗೆ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲ. ಹೊರಗಿನಿಂದ ಬಂದ ಅವರು ಇಂದು ಬಾಲಿವುಡ್ನಲ್ಲಿ ದೊಡ್ಡ ಸ್ಥಾನ ಗಳಿಸಿದ್ದಾರೆ. ಇದು ಜನರ ನಿರ್ಧಾರ. ನಮ್ಮನ್ನು ಜನರು ಈ ಸ್ಥಾನದಲ್ಲಿ ಕೂರಿಸಿದ್ದಾರೆಯೇ ಹೊರತು ಬೇರೆ ಯಾರೂ ಅಲ್ಲ. ಆದರೆ ಇಂದು ಅದೇ ಜನರು ಸ್ವಜನಪಕ್ಷಪಾತದ ಆರೋಪ ಮಾಡುವ ಮೂಲಕ ಸ್ಟಾರ್ಕಿಡ್ಗಳತ್ತ ಬೆರಳು ಮಾಡಿ ತೋರಿಸುತ್ತಿದ್ದಾರೆ. ನಿಮಗೆ ಇಷ್ಟವಿಲ್ಲದಿದ್ದರೆ ಆ ಸಿನಿಮಾ ನೋಡಬೇಡಿ. ನಿಮ್ಮನ್ನು ಇದೇ ಸಿನಿಮಾ ನೋಡಬೇಕೆಂದು ಯಾರೂ ಬಲವಂತ ಮಾಡುವುದಿಲ್ಲ. ಆದರೂ ನನಗೆ ಈ ನೆಪೋಟಿಸಮ್ ಬಗ್ಗೆ ಅನಗತ್ಯ ಚರ್ಚೆ ಏಕೆ ಮಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ' ಎಂದು ಕರೀನಾ ಕಪೂರ್ ಇದೀಗ ಸಿನಿಪ್ರಿಯರ ಮೇಲೆ ಸಿಡಿಮಿಡಿಕೊಂಡಿದ್ದಾರೆ.
'ಅಕ್ಷಯ್ ಕುಮಾರ್, ಶಾರುಖ್ ಖಾನ್, ಆಯುಷ್ಮಾನ್ ಖುರಾನಾ, ರಾಜ್ಕುಮಾರ್ ರಾವ್ ಇವರೆಲ್ಲಾ ಹೊರಗಿನಿಂದ ಬಂದವರೇ. ಆದರೂ ಇವರೆಲ್ಲಾ ಬಾಲಿವುಡ್ನಲ್ಲಿ ದೊಡ್ಡ ಹೆಸರು ಸಂಪಾದಿಸಿದ್ದಾರೆ. ಇದಕ್ಕೆ ಕಾರಣ ಅವರು ಬಹಳ ಶ್ರಮಪಟ್ಟಿದ್ದಾರೆ. ಅದೇ ರೀತಿ ನಾನು ಹಾಗೂ ಆಲಿಯಾ ಭಟ್ ಕೂಡಾ ಬಹಳ ಕಷ್ಟಪಟ್ಟಿದ್ದೇವೆ. ಇಂದು ನೀವು ನಮ್ಮ ಚಿತ್ರಗಳನ್ನು ನೋಡಿ ಎಂಜಾಯ್ ಮಾಡುತ್ತಿದ್ದೀರಿ. ಇದೆಲ್ಲಾ ನಿಮ್ಮ ಕೈಯ್ಯಲ್ಲಿ ಇದೆ' ಎಂದು ಕರೀನಾ ಇತ್ತೀಚೆಗೆ ಪತ್ರಿಕೆಯೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಕರೀನಾ ಕರಿಯರ್ ವಿಚಾರಕ್ಕೆ ಬರುವುದಾದರೆ ಅಮೀರ್ ಖಾನ್ ಜೊತೆ ಅವರು 'ಲಾಲ್ ಸಿಂಗ್ ಚಡ್ಢಾ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಲಿವುಡ್ನ ಟಾಮ್ ಹಂಕ್ಸ್ ನಟನೆಯ 'ಫಾರೆಸ್ಟ್ ಗಂಪ್' ಚಿತ್ರದಲ್ಲಿನ ಕೆಲವೊಂದು ಅಂಶಗಳನ್ನು ಈ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ.